ಬೆಂಗಳೂರು: ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ವಿಷಸರ್ಪಗಳಿಗೆ ಹೋಲಿಸಿ, ಗುಜರಾತ್ ಜನರನ್ನು ಅನಕ್ಷರಸ್ಥರೆಂದು ಅವಮಾನಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಳು ಹತಾಶೆಯ ಮಾನಸಿಕ ಅಸ್ವಸ್ಥತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಟಿ. ರವಿ ತೀವ್ರ ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ. ರವಿ, ಖರ್ಗೆ ಅವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿ ಯೋಗ್ಯ ಚಿಕಿತ್ಸೆ ನೀಡಬೇಕು ಮತ್ತು ರಾಜಕೀಯ ನಿವೃತ್ತಿ ಕೊಡಿಸಬೇಕು ಎಂದು ಆಗ್ರಹಿಸಿದರು.
“ಆರು ದಶಕಗಳ ರಾಜಕೀಯ ಅನುಭವ ಹೊಂದಿರುವ ಖರ್ಗೆ ಅವರು ನೀಡಿರುವ ಹೇಳಿಕೆಗಳು ಹಿರಿತನಕ್ಕೆ ಹಾಗೂ ಮುತ್ಸದ್ಧಿತನಕ್ಕೆ ಸರಿಹೊಂದುವುದಿಲ್ಲ. ಇದು ಸ್ಪಷ್ಟವಾದ ದ್ವೇಷದ ಹೇಳಿಕೆ” ಎಂದು ಅವರು ಹೇಳಿದರು.
ಖರ್ಗೆ ಅವರು ಗುಜರಾತ್ ಜನರು ಅನಕ್ಷರಸ್ಥರಾಗಿರುವುದರಿಂದ ಬಿಜೆಪಿ ಗೆದ್ದಿದೆ ಎಂದು ಹೇಳಿ ರಾಜ್ಯದ ಜನರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ ಸಿ.ಟಿ. ರವಿ, “ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗಳಲ್ಲಿ ನಿರಂತರವಾಗಿ ಬಿಜೆಪಿಯನ್ನು ಜನರು ಬೆಂಬಲಿಸುತ್ತಿದ್ದಾರೆ. ಹಾಗಾದರೆ ಕರ್ನಾಟಕದ ಜನರೂ ಅನಕ್ಷರಸ್ಥರೇ?” ಎಂದು ಪ್ರಶ್ನಿಸಿದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಆರ್‌ಎಸ್‌ಎಸ್ ಅನ್ನು ವಿಷಸರ್ಪಕ್ಕೆ ಹೋಲಿಸಿದ ಖರ್ಗೆ ಅವರು ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ ಸಿ.ಟಿ. ರವಿ, “ಇದು ಪ್ರಜಾಪ್ರಭುತ್ವ ವಿರೋಧಿ ವರ್ತನೆ. ಮಹಾತ್ಮ ಗಾಂಧಿಯ ಅನುಯಾಯಿಯಾಗಿ ಹೇಳಿಕೊಳ್ಳುವ ಅವರು ಅಹಿಂಸಾ ತತ್ವವನ್ನು ಮರೆತಿದ್ದಾರೆಯೇ?” ಎಂದು ಪ್ರಶ್ನೆ ಮಾಡಿದರು.
ಕರ್ನಾಟಕ ಸರ್ಕಾರ ತಂದಿರುವ ದ್ವೇಷ ಭಾಷಣ ನಿಷೇಧ ಮಸೂದೆಗೆ ಖರ್ಗೆ ಅವರ ಹೇಳಿಕೆಯೂ ಬರುತ್ತದೆಯೇ ಎಂದು ಪ್ರಶ್ನಿಸಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಿಯಾಂಕ್ ಖರ್ಗೆ ಯಾಕೆ ಮೌನವಹಿಸುತ್ತಿದ್ದಾರೆ? ಪ್ರಿಯಾಂಕ್ ಸಮರ್ಥನೆ ಮಾಡಿದರೆ ಅದು ಅನುವಂಶೀಯ ಮಾನಸಿಕ ಅಸ್ವಸ್ಥತೆ ಎಂದು ಸಾಬೀತಾಗುತ್ತದೆ” ಎಂದು ವ್ಯಂಗ್ಯವಾಡಿದರು.
ಖರ್ಗೆ ಅವರ ಹೇಳಿಕೆಗಳು ಸಮಾಜದಲ್ಲಿ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಹೇಳಿದ ಸಿ.ಟಿ. ರವಿ, ಕಾಂಗ್ರೆಸ್ ಪಕ್ಷಕ್ಕೆ ಸಂಬಂಧವಿದ್ದರೆ ಚುನಾವಣಾ ಆಯೋಗವು ಪಕ್ಷವನ್ನು ಚುನಾವಣಾ ವ್ಯಾಪ್ತಿಯಿಂದ ನಿಷೇಧಿಸುವ ಕ್ರಮ ಕೈಗೊಳ್ಳಬೇಕು. ಸಂಬಂಧವಿಲ್ಲ ಎಂದರೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ-ಕಾಂಗ್ರೆಸ್ ನಡುವೆ ವೈಚಾರಿಕ ವ್ಯತ್ಯಾಸವಿರಬಹುದು, ಆದರೆ ಬಿಜೆಪಿ ಎಂದಿಗೂ ಕಾಂಗ್ರೆಸ್ಸಿಗರನ್ನು ಕೊಲ್ಲಿ ಎಂದು ಹೇಳಿಲ್ಲ. ಚುನಾವಣೆಯಲ್ಲಿ ಸೋಲಿಸಿ ಎಂದು ಮಾತ್ರ ಕರೆ ನೀಡುತ್ತೇವೆ ಎಂದು ಸಿ.ಟಿ. ರವಿ ಹೇಳಿದರು.
ಕಾಂಗ್ರೆಸ್ ದೇಶವಿಭಜನೆಗೆ ಕಾರಣವಾಯಿತು, ಕುಟುಂಬ ರಾಜಕಾರಣ ಮಾಡುತ್ತಿದೆ, ಅಂಬೇಡ್ಕರ್ ಅವರನ್ನು ಸೋಲಿಸಿತು, ತುರ್ತುಪರಿಸ್ಥಿತಿ ಹೇರಿತು ಎಂದು ಆರೋಪಿಸಿದ ಅವರು, “ಬಿಜೆಪಿ ಮತ್ತು ಆರ್‌ಎಸ್‌ಎಸ್ ಇರುವುದರಿಂದಲೇ ಕಾಂಗ್ರೆಸ್ ಇದೆ ಮತ್ತು ರಾಜಕಾರಣ ಮಾಡಲು ಸಾಧ್ಯವಾಗಿದೆ” ಎಂದರು.
ಕಾಂಗ್ರೆಸ್‍ಗೆ ನಿರಂತರ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಹೇಳಿದ ಸಿ.ಟಿ. ರವಿ, ಪಶ್ಚಿಮ ಬಂಗಾಳದಲ್ಲಿ ಠೇವಣಿಯೂ ಬರಲಿಲ್ಲ ಎಂದು ಉಲ್ಲೇಖಿಸಿದರು. ಕರ್ನಾಟಕದಲ್ಲಿ ಸರ್ಕಾರದ ಕೆಟ್ಟ ಆಡಳಿತದಿಂದ 2028ರಲ್ಲಿ ಕಾಂಗ್ರೆಸ್ ಸೋಲು ಖಚಿತ ಎಂದು ಅವರು ಭವಿಷ್ಯ ನುಡಿದರು.












