ಬೆಂಗಳೂರು: ಭಾಷೆ, ಸಂಸ್ಕೃತಿ ಮತ್ತು ಪ್ರಾದೇಶಿಕತೆಗಳ ವೈವಿಧ್ಯತೆಯಿಂದ ಕೂಡಿದ ಭಾರತವನ್ನು ಸಮಾನ ನೆಲೆಗಟ್ಟಿನಲ್ಲಿ ಕಟ್ಟಲು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಕ್ಕಿಂತ ಮುಂಚೆ ಬೇರೆ ಯಾರಿಗೂ ಸಾಧ್ಯವಾಗಲಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ‘ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಇಂದಿನ ಮಾಧ್ಯಮಗಳು ಸಂವೇದನಾಶೀಲವಾಗಿವೆಯೇ?’ ಎಂಬ ವಿಷಯದಲ್ಲಿ ಶುಕ್ರವಾರ ನಡೆದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯದ ಅಕಾಡೆಮಿಕ್ ಬ್ಲಾಕ್‌ನ ಡಬ್ಲ್ಯುಬಿಸಿ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರೊ. ಬಿಳಿಮಲೆ ಮಾತನಾಡುತ್ತಾ, “ಸ್ವತಃ ಪತ್ರಕರ್ತರಾಗಿ ಸರಿಗಟ್ಟಲಾರದ ಓದುಗರಾಗಿದ್ದ ಅಂಬೇಡ್ಕರ್ ಅವರು, ಭಾರತದ ಸಮಾಜೋ-ಆರ್ಥಿಕ ಸ್ವಾತಂತ್ರ್ಯದ ನೆಲೆಗಟ್ಟಿನ ಮೇಲೆ ಜಾತಿ, ಧರ್ಮ, ಲಿಂಗ ತಾರತಮ್ಯಗಳಿಗೆ ಆತೀತವಾದ ಸಂವಿಧಾನವೆಂಬ ಸಮಾನ ಸೂತ್ರವನ್ನು ಕಟ್ಟಿಕೊಟ್ಟರು” ಎಂದರು.

ಅವರು ಮುಂದುವರೆದು, ಸಂವಿಧಾನದ ೧೪ನೇ ವಿಧಿ (ಎಲ್ಲರೂ ಸಮಾನರು), ೧೫ನೇ ವಿಧಿ (ಧರ್ಮ, ಜಾತಿ, ಲಿಂಗ, ಸ್ಥಳ ಆಧಾರದಲ್ಲಿ ಬೇಧಭಾವ ಮಾಡಬಾರದು), ೧೬ನೇ ವಿಧಿ (ಸಮಾನ ಅವಕಾಶಗಳು), ೧೭ನೇ ವಿಧಿ (ಅಸ್ಪೃಶ್ಯತೆ ಅಪರಾಧ) ಮತ್ತು ೨೯ನೇ ವಿಧಿ (ಅಲ್ಪಸಂಖ್ಯಾತರ ರಕ್ಷಣೆ)ಗಳು ಸಮಸಮಾಜದ ಭಾರತವನ್ನು ಕಟ್ಟುವ ಆಶಯವನ್ನು ಸ್ಪಷ್ಟವಾಗಿ ಹೇಳುತ್ತವೆ ಎಂದು ವಿವರಿಸಿದರು.
“ಈ ಸಾಂವಿಧಾನಿಕ ಅಂಶಗಳನ್ನು ನಮ್ಮ ಸಮಾಜದ ಆಗುಹೋಗುಗಳಲ್ಲಿ ಮಾಧ್ಯಮಗಳು ಎಷ್ಟು ಪ್ರಾತಿನಿಧಿಕರಿಸುತ್ತವೆ ಎಂಬುದನ್ನು ಪರಿಶೀಲಿಸಿದರೆ ಸತ್ಯ ತಿಳಿಯುತ್ತದೆ” ಎಂದು ಅವರು ಹೇಳಿದರು.
ಭಾರತದಲ್ಲಿನ ಅಸಮಾನತೆಯನ್ನು ವ್ಯಾಖ್ಯಾನಿಸಲು ಶಂಭೂಕ ಮತ್ತು ಕರ್ಣರ ಕಥೆಗಳನ್ನು ರೂಪಕಗಳಾಗಿ ಬಳಸಬಹುದು ಎಂದು ಹೇಳಿದ ಬಿಳಿಮಲೆ, ಆದರೆ ಇದೇ ಭಾಷೆಯನ್ನು ಪ್ರಭುತ್ವಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತವೆ ಎಂದು ತಿಳಿಸಿದರು. “ಭಾಷೆಯಲ್ಲಿ ಶ್ರೇಣೀಕರಣ ಇಲ್ಲ. ಅದು ಅನುಭವಗಳನ್ನು ವಿರಚಿಸುತ್ತದೆ. ನಮ್ಮ ಕಥೆಗಳಿಗೆ ನಾವೇ ಕಿವಿಯಾಗಬೇಕು” ಎಂದು ಅವರು ಕರೆ ನೀಡಿದರು.
ಪ್ರಧಾನ ಭಾಷಣ ಮಾಡಿದ ಪತ್ರಕರ್ತ ಕೋಟಿಗಾನಹಳ್ಳಿ ರಾಮಯ್ಯ ಅವರು, “೧೯೨೭ರ ಮಹಾಡ್ ಚಳುವಳಿಗೆ ಕಾರಣವಾದ ಅಸಮಾನತೆ ಮತ್ತು ಶ್ರೇಣೀಕರಣಗಳು ಇಂದಿಗೂ ಇವೆ. ಅಂಬೇಡ್ಕರ್ ಅವರ ವಿಚಾರಗಳನ್ನು ನಿರ್ಲಕ್ಷಿಸಿರುವುದಕ್ಕಾಗಿ ದೇಶದ ಜನತೆ ಕ್ಷಮೆ ಕೇಳಬೇಕು” ಎಂದರು.

“ಸಾಮಾಜಿಕ ನ್ಯಾಯ ಎಂಬ ಮುಚ್ಚಲಾಗಿರುವ ಕಿಟಕಿಯ ಬಗ್ಗೆ ಮಾತನಾಡುವುದು ವ್ಯರ್ಥ. ಮಾಧ್ಯಮಗಳು ಯಾವಾಗ ಸಂವೇದನಾಶೀಲವಾಗಿದ್ದವು?” ಎಂದು ಪ್ರಶ್ನಿಸಿದ ಅವರು, ಅಂಬೇಡ್ಕರ್ ಅವರ ಅಪ್ರಕಟಿತ ಸಾವಿರಾರು ಪುಟಗಳ ಬರಹಗಳು ಇನ್ನೂ ಹೆಚ್ಚು ಜನರನ್ನು ತಲುಪಬೇಕಿದೆ ಎಂದು ತಿಳಿಸಿದರು. ಇದಕ್ಕೆ ಭೌದ್ಧಿಕ ದಾರಿದ್ರ್ಯವೂ ಒಂದು ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಿ. ರಮೇಶ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, “ಅಂಬೇಡ್ಕರ್ ಅವರ ವಿಚಾರಗಳು ಎಂದೆಂದಿಗೂ ಪ್ರಸ್ತುತವಾಗಿವೆ” ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೆಷಾ ಖಾನಂ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಸಹನಾ ಎಂ. ಅವರು ಸ್ವಾಗತಿಸಿದರು.












