ಬೆಂಗಳೂರು: ಯಲಹಂಕ ಸಮೀಪದ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಯುಹೆಚ್‌ಎಸ್) ಆವರಣ, ಜಿಕೆವಿಕೆಯಲ್ಲಿ ಪ್ರತಿ ತಿಂಗಳು ಎರಡನೇ ಶನಿವಾರ ನಡೆಯುವ ‘ಯುಹೆಚ್‌ಎಸ್ ಸಂತೆ’ಗೆ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಈ ತಿಂಗಳ ಎರಡನೇ ‘ಯುಹೆಚ್‌ಎಸ್ ಸಂತೆ’ ಶನಿವಾರ (ಏಪ್ರಿಲ್ 11) ರಂದು ಜರುಗಿತು. ರೈತರು, ರೈತ ಉತ್ಪಾದಕ ಸಂಘಗಳು, ಹೊಸ ಉದ್ದಿಮೆದಾರರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಂದ ಬಂದ ರೈತರು ತಮ್ಮ ತಾಜಾ ತರಕಾರಿ, ಹಣ್ಣು, ಹೂಗಳು, ಮೌಲ್ಯವರ್ಧಿತ ಉತ್ಪನ್ನಗಳಾದ ಸಾಂಬಾರು ಪುಡಿಗಳು, ಶುದ್ಧ ನಾಟಿ ಬೆಣ್ಣೆ, ಕೋಲ್ಡ್ ಪ್ರೆಸ್ಡ್ ಎಣ್ಣೆ, ಗೋವು ಉತ್ಪನ್ನಗಳು, ತರಕಾರಿ-ಹೂವಿನ ಬೀಜಗಳು ಮತ್ತು ಇತರೆ ಮೌಲ್ಯವರ್ಧಿತ ಪದಾರ್ಥಗಳನ್ನು 52 ಮಳಿಗೆಗಳಲ್ಲಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮೆಗಾ ನರ್ಸರಿಯಲ್ಲಿ ಅಭಿವೃದ್ಧಿಪಡಿಸಿದ ಅಲಂಕಾರಿಕ ಸಸಿಗಳು, ಹಣ್ಣಿನ ಕಸಿ ಸಸಿಗಳು, ಪ್ಲಾಂಟೇಶನ್ ಸಸಿಗಳು, ಔಷಧೀಯ ಮತ್ತು ಸುಗಂಧಿ ಸಸಿಗಳನ್ನು ವಿಶೇಷವಾಗಿ ಮಾರಾಟಕ್ಕಿಟ್ಟಿರಲಿಲ್ಲ. ನಗರವಾಸಿಗಳಿಗೆ ತೋಟಗಾರಿಕೆ ಬೆಳೆಗಳ ತಾಂತ್ರಿಕ ಮಾಹಿತಿ, ಸಮಗ್ರ ಗಾರ್ಡನಿಂಗ್ ಸಲಹೆಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ವಿವರಣೆಯನ್ನೂ ನೀಡಲಾಯಿತು.

ಈ ಸಂತೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಗ್ರಾಹಕರು ಭಾಗವಹಿಸಿದ್ದರು. ರೈತರು ಮತ್ತು ಉದ್ದಿಮೆದಾರರಿಗೆ ಒಟ್ಟಾರೆಯಾಗಿ ಸುಮಾರು 5 ರಿಂದ 6 ಲಕ್ಷ ರೂಪಾಯಿಗಳ ವಹಿವಾಟು ನಡೆದಿದೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ. ಎಸ್. ಎಲ್. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುಹೆಚ್‌ಎಸ್ ಸಂತೆಯು ರೈತರಿಗೆ ನೇರ ಮಾರುಕಟ್ಟೆ ಅವಕಾಶವನ್ನು ಕಲ್ಪಿಸುವುದರ ಜೊತೆಗೆ, ನಗರವಾಸಿಗಳಿಗೆ ತಾಜಾ ಮತ್ತು ಶುದ್ಧ ಉತ್ಪನ್ನಗಳನ್ನು ಕೊಳ್ಳುವ ಅವಕಾಶವನ್ನು ಒದಗಿಸುತ್ತಿದೆ.












