ಝೀರಾ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, “ಪತ್ರಕರ್ತರು ಸದಾಕಾಲ ಜನಪರವಾಗಿರಬೇಕು, ಸಮಾಜದ ಪರವಾಗಿರಬೇಕು. ಅಶಕ್ತರಿಗೆ ಶಕ್ತಿ ತುಂಬುವ ಕಾರ್ಯ ಮಾಡಬೇಕು” ಎಂದು ಸಲಹೆ ನೀಡಿದರು.
35 ನಿಮಿಷಗಳಿಗೂ ಹೆಚ್ಚು ಕಾಲ ಮಾತನಾಡಿದ ಸಿದ್ಧರಾಮಯ್ಯ ಅವರು, ಪತ್ರಕರ್ತರಿಗೆ ಹಲವು ಮುಖ್ಯ ಸಂದೇಶಗಳನ್ನು ನೀಡಿದರು. “ಪತ್ರಕರ್ತರು ಸಮಾಜವನ್ನು ತಿದ್ದುವ, ಜನತೆಯನ್ನು ಜಾಗೃತಗೊಳಿಸುವ ಕಾರ್ಯ ಮಾಡಬೇಕು. ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು,” ಎಂದು ಒತ್ತಿ ಹೇಳಿದರು.

ಸಂವಿಧಾನ ಮತ್ತು ಸಮಾಜ ಸುಧಾರಣೆಯ ಬಗ್ಗೆ
ಸಿದ್ಧರಾಮಯ್ಯ ಅವರು ಹೇಳಿದರು, “ನಮ್ಮ ಸಮಾಜದಲ್ಲಿ ಅನೇಕ ಜಾತಿ, ಧರ್ಮ, ಭಾಷೆ ಮತ್ತು ಸಂಸ್ಕೃತಿಗಳಿವೆ. ಇಂತಹ ವೈವಿಧ್ಯಮಯ ಸಮಾಜಕ್ಕೆ ಎಲ್ಲರೂ ಒಪ್ಪುವ ಸಂವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ್ದಾರೆ. ಆ ಸಂವಿಧಾನದ ಆಶಯಗಳು ಸಮಾಜದಲ್ಲಿ ಜಾರಿಯಾಗುತ್ತಿವೆಯೇ ಎಂದು ಪತ್ರಕರ್ತರು ಪರಿಶೀಲಿಸಬೇಕು.”
ಮಹಾತ್ಮ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಅವರೂ ಪತ್ರಕರ್ತರಾಗಿದ್ದರು ಎಂದು ನೆನಪಿಸಿಕೊಂಡ ಮುಖ್ಯಮಂತ್ರಿ, “ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳ ಮೂಲಕ ನೊಂದವರ ಧ್ವನಿಯಾಗಿ ಕೆಲಸ ಮಾಡಿದರು. ಇಂದಿನ ಪತ್ರಕರ್ತರು ಅವರ ಆಶಯಗಳನ್ನು ಅರಿತು ಅದೇ ರೀತಿ ಕಾರ್ಯನಿರ್ವಹಿಸಬೇಕು,” ಎಂದರು.

ಜಾತಿ ವ್ಯವಸ್ಥೆ, ಅಸಮಾನತೆ ಮತ್ತು ಶೋಷಣೆ
“ಸಮಾಜದಲ್ಲಿ ಇನ್ನೂ ಜಾತಿ ವ್ಯವಸ್ಥೆ ಇದೆ. ಸಮಸಮಾಜ ನಿರ್ಮಾಣಕ್ಕಾಗಿ ಬಸವಣ್ಣನವರಂತಹ ಶರಣರು ಶ್ರಮಿಸಿದರು. ಅಸಮಾನತೆ ಇದ್ದರೆ ಶೋಷಣೆಗೆ ಅವಕಾಶವಾಗುತ್ತದೆ ಎಂಬುದು ಪಟ್ಟಭದ್ರರ ಬುದ್ಧಿವಂತಿಕೆ. ಮನುವಾದಿಗಳು ಹುಟ್ಟುಹಾಕಿದ ಜಾತಿ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಅವರು ಬಯಸುತ್ತಾರೆ. ಇಂತಹ ಸೂಕ್ಷ್ಮ ವಿಷಯಗಳನ್ನು ಪತ್ರಕರ್ತರು ಅರಿಯಬೇಕು,” ಎಂದು ಸಿದ್ಧರಾಮಯ್ಯ ಅವರು ತಿಳಿಸಿದರು.
ಮಕ್ಕಳಿಗೆ ವೈಚಾರಿಕತೆ ಮತ್ತು ವೈಜ್ಞಾನಿಕತೆ ಇಲ್ಲದ ಶಿಕ್ಷಣ ಸಿಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, “ಬಸವಣ್ಣನವರು ಕರ್ಮಸಿದ್ಧಾಂತವನ್ನು ತಳ್ಳಿಹಾಕಿದರು. ಮಾನವೀಯತೆಯನ್ನು ಬೆಳೆಸಬೇಕು. ಮಾನವೀಯತೆ ಇದ್ದರೆ ಶೋಷಣೆಗೆ ಅವಕಾಶವಿರುವುದಿಲ್ಲ. ಸಮಾಜ ಒಡೆಯುವ ಪಟ್ಟಭದ್ರರನ್ನು ಹತ್ತಿಕ್ಕುವ ಕೆಲಸ ಪತ್ರಕರ್ತರು ಮಾಡಬೇಕು,” ಎಂದರು.

ಆರ್ಥಿಕ ಸಮಾನತೆ ಮತ್ತು ಪತ್ರಕರ್ತರ ಸ್ವಾತಂತ್ರ್ಯ
“ದೇವರ ಹೆಸರಿನಲ್ಲಿ ಶೋಷಣೆ ನಡೆಯುತ್ತಿದೆ. ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣ ಸಿಗುವುದು ಕಷ್ಟವಾಗಿದೆ. ಪತ್ರಿಕೆಗಳು ಕೇವಲ ಸುದ್ದಿ ಪ್ರಕಟಿಸಿದರೆ ಸಾಲದು, ಸಾಮಾಜಿಕ ಸುಧಾರಣೆಗಾಗಿ ನಿರಂತರ ಹೋರಾಡಬೇಕು,” ಎಂದು ಅವರು ಒತ್ತಿ ಹೇಳಿದರು.
ಪತ್ರಕರ್ತರು ಕಾರ್ಪೋರೇಟ್ ವಲಯದ ಹಿಡಿತದಲ್ಲಿರುವುದು ಮತ್ತು ಬರೆಯಲು ಮುಕ್ತ ಅವಕಾಶವಿಲ್ಲದ ಪರಿಸ್ಥಿತಿ ಇರುವುದನ್ನು ಪ್ರಸ್ತಾಪಿಸಿದ ಸಿದ್ಧರಾಮಯ್ಯ ಅವರು, “ಪತ್ರಕರ್ತರಿಗೆ ಮುಕ್ತವಾಗಿ ಬರೆಯುವ ಸ್ವಾತಂತ್ರ್ಯ ಇರಬೇಕು. ವಸ್ತುನಿಷ್ಠವಾಗಿ, ಸತ್ಯವನ್ನು ಜನರ ಮುಂದಿಡಬೇಕು. ಊಹಾಮಾಧ್ಯಮ ಅಪಾಯಕಾರಿ. ಕ್ಷುಲ್ಲಕ ವಿಷಯಗಳನ್ನು ಮುನ್ನೆಲೆಗೆ ತರಬಾರದು,” ಎಂದು ಸಲಹೆ ಮಾಡಿದರು.
“ಬಡವರಿಗೂ ಕೊಂಡುಕೊಳ್ಳುವ ಆರ್ಥಿಕ ಶಕ್ತಿ ಬರಬೇಕು. ಆರ್ಥಿಕ ಮತ್ತು ಸಾಮಾಜಿಕ ಚಲನಶೀಲತೆ ತರುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು,” ಎಂದು ಅವರು ಹೇಳಿದರು.

ಸಮ್ಮೇಳನದಲ್ಲಿ ಇತರರು
ಸಚಿವರಾದ ಈಶ್ವರ ಖಂಡ್ರೆ ಮತ್ತು ರಹೀಂ ಖಾನ್ ಅವರು ಸಹ ಮಾತನಾಡಿದರು. ಸಂಘದ ಬೀದರ್ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಅವರು ಸ್ವಾಗತಿಸಿದರು.
ಸಮಾರಂಭದಲ್ಲಿ ಹಾರಕೂಡು ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಂಸದ ಸಾಗರ ಖಂಡ್ರೆ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ವಿವಿಧ ಶಾಸಕರು, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ನೆನಪಿನ ಕೈಪಿಡಿ ಬಿಡುಗಡೆ
ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಿಡುಗಡೆ ಮಾಡಿದರು. ಪತ್ರಕರ್ತರಾದ ಶಶಿಕಾಂತ ಶೆಂಬೆಳ್ಳಿ ಮತ್ತು ಶ್ರೀಕಾಂತ ಬಿರಾದಾರ್ ಸಂಪಾದಿಸಿದ ‘ಶರಣ ಸೂಫಿ ಸಿರಿ’ ವಿಶೇಷ ಸಂಚಿಕೆಯನ್ನು ಸಹ ಇದೇ ವೇಳೆ ಬಿಡುಗಡೆಗೊಳಿಸಲಾಯಿತು.












