ನವದೆಹಲಿ: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಬಸವ ಜಯಂತಿ ಹಿನ್ನೆಲೆಯಲ್ಲಿ ಸಂಸತ್ ಭವನದ ಆವರಣದಲ್ಲಿರುವ ಪ್ರೇರಣಾ ಸ್ಥಳದಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.
ಇಂದು ಬೆಳಗ್ಗೆ ನಡೆದ ಈ ಸರಳ ಕಾರ್ಯಕ್ರಮದಲ್ಲಿ ಸಚಿವ ಕುಮಾರಸ್ವಾಮಿ ಅವರು ಬಸವಣ್ಣನವರ ಆದರ್ಶಗಳನ್ನು ಸ್ಮರಿಸಿ ಮಾತನಾಡಿದರು. “ಜಗಜ್ಯೋತಿ ಬಸವೇಶ್ವರರ ಸಂದೇಶಗಳು ಎಂದೆಂದಿಗೂ ನಮಗೆಲ್ಲರಿಗೂ ಅನುಕರಣೀಯ ಮತ್ತು ಪ್ರೇರಣಾದಾಯಕವಾಗಿವೆ” ಎಂದು ಅವರು ಹೇಳಿದರು.

12ನೇ ಶತಮಾನದಲ್ಲೇ ಪ್ರಜಾಪ್ರಭುತ್ವ ಮತ್ತು ಜನರ ಆಡಳಿತದ ಬಗ್ಗೆ ಆಳವಾದ ಆಲೋಚನೆ ಮಾಡಿದ ಬಸವಣ್ಣನವರು, ಸ್ತ್ರೀ-ಪುರುಷ ಭೇದವಿಲ್ಲದೆ ಎಲ್ಲರಿಗೂ ಸಮಾನ ಸ್ಥಾನಮಾನ ನೀಡುವಲ್ಲಿ ಶ್ರಮಿಸಿದ್ದರು ಎಂದು ಸಚಿವರು ನೆನಪಿಸಿದರು. “ಅಂತಹ ಮಹಾನ್ ಚೇತನರ ಸಂದೇಶಗಳು ಮತ್ತು ಆದರ್ಶಗಳು ನಮಗೆ ದೊಡ್ಡ ಆಸ್ತಿಯಾಗಿವೆ” ಎಂದು ಅವರು ಒತ್ತಿ ಹೇಳಿದರು.
ಬಸವಣ್ಣನವರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಅಡಿಪಾಯ ಹಾಕಿದ್ದರು. ಎಲ್ಲ ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯ ನೀಡಿ, ಸರ್ವರ ಸಾಮರಸ್ಯವನ್ನು ಉತ್ತೇಜಿಸಿದ್ದ ಅವರ ಕೊಡುಗೆಯನ್ನು ಸಚಿವರು ಸ್ಮರಿಸಿದರು.
ಈ ವೇಳೆ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಕಿರಣ್ ರಿಜಿಜು, ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ಶ್ರೀ ವಿ. ಸೋಮಣ್ಣ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.












