ಬೆಂಗಳೂರು: ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ಭಾರತದ ಸರ್ವೋಚ್ಚ ನ್ಯಾಯಾಲಯ ‘ಸಮಾಧಾನ ಸಮಾರೋಹ–2026’ ಹೆಸರಿನ ವಿಶೇಷ ಲೋಕ ಅದಾಲತ್‌ನ್ನು ಆಗಸ್ಟ್ 21, 22 ಮತ್ತು 23ರಂದು ಮೂರು ದಿನಗಳ ಕಾಲ ಆಯೋಜಿಸಲು ನಿರ್ಧರಿಸಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಅನು ಸಿವರಾಮನ್ ಅವರು, ಸುಪ್ರೀಂ ಕೋರ್ಟ್ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಸಂಬಂಧಿಸಿದ 4,328 ಬಾಕಿ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಕ್ಕೆ ಗುರುತಿಸಿದೆ ಎಂದು ತಿಳಿಸಿದರು. ಆಸಕ್ತ ಕಕ್ಷಿದಾರರು ತಮ್ಮ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಾನೂನು ಸೇವೆಗಳ ಪ್ರಾಧಿಕಾರಗಳ ಮೂಲಕ ಸಾರ್ವಜನಿಕರು ಇಂದಿನಿಂದಲೇ ನೋಂದಣಿ ಮಾಡಿಕೊಳ್ಳಬಹುದು. ಆಯ್ಕೆಯಾದ ಪ್ರಕರಣಗಳನ್ನು ನೋಂದಾಯಿತ ಸಮನ್ವಯಕರ ಮಧ್ಯಸ್ಥಿಕೆಯಲ್ಲಿ ಸ್ಥಳೀಯ ಮಟ್ಟದಲ್ಲಿಯೇ ಸಂಧಾನದ ಮೂಲಕ ಬಗೆಹರಿಸಲಾಗುವುದು.
ಈ ವಿಶೇಷ ಲೋಕ ಅದಾಲತ್‌ನಲ್ಲಿ ಬ್ಯಾಂಕಿಂಗ್, ವಿಮೆ, ನಾಗರೀಕ, ಮೋಟಾರು ಅಪಘಾತ ಪರಿಹಾರ, ಗ್ರಾಹಕ ವ್ಯಾಜ್ಯ, ರೇರಾ, ಕ್ರಿಮಿನಲ್, ಕೌಟುಂಬಿಕ, ಕಾರ್ಮಿಕ ಹಾಗೂ ಕೈಗಾರಿಕಾ, ಭೂಸ್ವಾಧೀನ, ಆಸ್ತಿ ತೆರಿಗೆ, ಬಾಡಿಗೆ ನಿಯಂತ್ರಣ, ಸಾರ್ವಜನಿಕ ಆವರಣ ತೆರವು, ವರ್ಗಾವಣೆ ಅರ್ಜಿಗಳು ಮತ್ತು ಸೇವಾ ಕಾನೂನುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಪರಿಗಣಿಸಲಾಗಿದೆ.
ಕರ್ನಾಟಕದ ಜಿಲ್ಲೆಗಳ ಪೈಕಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 1,245 ಪ್ರಕರಣಗಳು ಗುರುತಿಸಲ್ಪಟ್ಟಿದ್ದು, ಬೆಳಗಾವಿ (517), ಕಲಬುರಗಿ (269), ವಿಜಯಪುರ (213), ಧಾರವಾಡ (188), ಬಾಗಲಕೋಟೆ (159), ಗದಗ (125), ಬಳ್ಳಾರಿ (109), ತುಮಕೂರು (101), ಕೊಪ್ಪಳ (98) ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಕರಣಗಳು ಒಳಗೊಂಡಿವೆ.

ಇದಲ್ಲದೆ, 937ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸರ್ಕಾರವೇ ಪಕ್ಷವಾಗಿದ್ದು, ಪ್ರಕರಣಗಳ ಇತ್ಯರ್ಥಕ್ಕೆ ರಾಜ್ಯ ಸರ್ಕಾರದಿಂದ ಸಹಕಾರ ಪಡೆಯಲು ಅಡ್ವಕೇಟ್ ಜನರಲ್ ಅವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಇನ್ನೊಬ್ಬ ನ್ಯಾಯಮೂರ್ತಿ ಆರ್. ದೇವದಾಸ್ ಅವರು, ಈ ವಿಶೇಷ ಲೋಕ ಅದಾಲತ್ ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ ಮತ್ತು ವೇಗವಾಗಿ ನ್ಯಾಯ ಪಡೆಯಲು ಉತ್ತಮ ಅವಕಾಶವಾಗಿದ್ದು, ಸಮಯ ಮತ್ತು ಹಣ ಉಳಿತಾಯದೊಂದಿಗೆ ಉಭಯಪಕ್ಷಗಳ ನಡುವೆ ಸೌಹಾರ್ದತೆಯನ್ನು ಕಾಪಾಡಲು ಸಹಕಾರಿ ಎಂದರು.
ಆಸಕ್ತ ಕಕ್ಷಿದಾರರು ಅಥವಾ ಅವರ ವಕೀಲರು ಮೇ 31, 2026ರೊಳಗೆ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನ ಗೂಗಲ್ ಫಾರ್ಮ್ ಮೂಲಕ ಅರ್ಜಿ ಸಲ್ಲಿಸಬಹುದು. ನೋಟಿಸ್ ಪಡೆದವರು ತಮ್ಮ ಜಿಲ್ಲಾ ಅಥವಾ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರಗಳ ಮುಂದೆ ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಪೂರ್ವ ಸಂಧಾನ ಸಭೆಗಳಲ್ಲಿ ಭಾಗವಹಿಸಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಸರ್ವೋಚ್ಚ ನ್ಯಾಯಾಲಯ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.












