ಬೆಂಗಳೂರು: ಎಲ್ಲಾ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕವನ್ನು ದೇಶದಲ್ಲೇ “ಮಾದರಿ ರಾಜ್ಯ”ವನ್ನಾಗಿ ಮಾಡಲು ಶ್ರಮಿಸಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕರೆ ನೀಡಿದರು.
ವಿಧಾನಸೌಧದಲ್ಲಿ ಶುಕ್ರವಾರ “ಘನ ತ್ಯಾಜ್ಯ ನಿರ್ವಹಣೆ ನಿಯಮಗಳು-2026ರ ಅನ್ವಯ ರಾಜ್ಯದಲ್ಲಿ ಅನುಷ್ಠಾನ” ಕುರಿತು ರಾಜ್ಯ ಮಟ್ಟದ ವಿಡಿಯೋ ಸಂವಾದ ಕಾರ್ಯಾಗಾರವನ್ನು ಅಧ್ಯಕ್ಷತೆ ವಹಿಸಿ ಉದ್ದೇಶಿಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನ ಆದೇಶದಂತೆ ಈಗಾಗಲೇ ದೇಶದ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಸೂಚನೆ ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರವು ಈ ನಿಯಮಗಳ ಯಶಸ್ವಿ ಅನುಷ್ಠಾನಕ್ಕೆ ಐದು ರಾಜ್ಯಗಳಿಗೆ ವಿಶೇಷ ಜವಾಬ್ದಾರಿ ನೀಡಿದೆ. ಆದ್ದರಿಂದ ಯಾವುದೇ ನಿರ್ಲಕ್ಷ್ಯವಿಲ್ಲದೆ ಎಲ್ಲಾ ಹಂತಗಳಲ್ಲಿ ಅರಿವು ಮೂಡಿಸುವುದು ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಅತ್ಯಗತ್ಯ ಎಂದು ಡಾ. ಶಾಲಿನಿ ರಜನೀಶ್ ತಿಳಿಸಿದರು.
ಪ್ರಮುಖ ನಿರ್ದೇಶನಗಳು:
- ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು 4 ರೀತಿಯಲ್ಲಿ ವರ್ಗೀಕರಣ ಮಾಡಿ ವೈಜ್ಞಾನಿಕ ವಿಲೇವಾರಿ ಮಾಡುವುದು.
- ರಾಜ್ಯದ ಎಲ್ಲಾ 6,000 ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ‘ಸ್ವಚ್ಛತಾ ವಾಹಿನಿ’ಗಳಾಗಿ ವಿಸ್ತರಿಸಿ ತರಬೇತಿ ನೀಡುವುದು.
- ಬೃಹತ್ ತ್ಯಾಜ್ಯ ಉತ್ಪಾದಕರನ್ನು ಆನ್‌ಲೈನ್ ನೋಂದಣಿ ಮಾಡಿಸುವುದು.
- ಪ್ಲಾಸ್ಟಿಕ್, ಸ್ಯಾನಿಟರಿ ಮತ್ತು ಬಯೋ-ಮೆಡಿಕಲ್ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ.
- ‘ವೇಸ್ಟ್ ಟು ಎನರ್ಜಿ’ ಮತ್ತು ‘ವೇಸ್ಟ್ ಟು ವೆಲ್ತ್’ ಯೋಜನೆಗಳಿಗೆ ಉತ್ತೇಜನ.
- ಹಸಿ ಕಸ, ದ್ರವ ತ್ಯಾಜ್ಯ ಮತ್ತು ಗೋಶಾಲೆಗಳಲ್ಲಿ ವೈಜ್ಞಾನಿಕ ನಿರ್ವಹಣೆ.
- ಪರ್ಯಾಯ ಹಸಿರು ಉತ್ಪನ್ನಗಳ ಪ್ರೋತ್ಸಾಹ ಮತ್ತು ಕಸದಿಂದ ತಯಾರಾದ ಉತ್ಪನ್ನಗಳಿಗೆ ಮಾರುಕಟ್ಟೆ.
- ಶಾಲಾ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಸಾರ್ವಜನಿಕ ಜಾಗೃತಿ ಅಭಿಯಾನ.
ಪ್ರಗತಿ ಅಂಕಿ-ಅಂಶಗಳು:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತ ಫೌಜಿಯಾ ತರನ್ನುಮ್ ಅವರು ಸಭೆಯಲ್ಲಿ ಮಾಹಿತಿ ನೀಡುತ್ತಾ, ರಾಜ್ಯದಲ್ಲಿ 5,959 ಎಸ್‌ವಿಎಂ ಘಟಕಗಳು, 4,252 ಟಿಪಿಡಿ ಸಂಸ್ಕರಣಾ ಸಾಮರ್ಥ್ಯ, 7,312 ತ್ಯಾಜ್ಯ ಸಂಗ್ರಹಣಾ ವಾಹನಗಳು ಮತ್ತು 5,501 ಸ್ವಚ್ಛ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೂತನ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು-2026ರ ಬಗ್ಗೆ ಅರಿವು ಮೂಡಿಸುವ ಪ್ರಚಾರ ಸಾಮಗ್ರಿಗಳನ್ನು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಅಧಿಕೃತವಾಗಿ ಲೋಕಾರ್ಪಣೆ ಮಾಡಿದರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಸಮೀರ್ ಶುಕ್ಲಾ, ಪಂಚಾಯತ್ ರಾಜ್ ಕಾರ್ಯದರ್ಶಿ ರಂದೀಪ್ ಡಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಎಸ್‌ವಿಎಂ ನೋಡಲ್ ಅಧಿಕಾರಿಗಳು ಮತ್ತು ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.












