ಸುಸ್ಥಿರ ಭವಿಷ್ಯಕ್ಕಾಗಿ ಪರಿಸರ ರಕ್ಷಣೆ ಅತ್ಯಗತ್ಯ: ಡಾ. ಶಾಲಿನಿ ರಜನೀಶ್
ಬೆಂಗಳೂರು: ವಿಶ್ವ ಪರಿಸರ ದಿನಾಚರಣೆಯು ಕೇವಲ ಒಂದು ದಿನದ ಆಚರಣೆಯಾಗಬಾರದು. ಅದು ನಮ್ಮ ಜಂಟಿ ಜವಾಬ್ದಾರಿಯನ್ನು ನೆನಪಿಸುವ ಮತ್ತು ವರ್ಷಪೂರ್ತಿ ಕಾರ್ಯನಿರ್ವಹಿಸುವ ಯೋಜನೆಯಾಗಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹೇಳಿದರು.
ಇಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ) ದಿವೇಕಾ ಹವಾಮಾನ ಬದಲಾವಣೆ ಕೇಂದ್ರದ ವತಿಯಿಂದ ಜೂನ್ 2 ಮತ್ತು 3ರಂದು ಆಯೋಜಿಸಲಾಗಿರುವ “ಹವಾಮಾನ, ಮಾಲಿನ್ಯ ಮತ್ತು ಆರೋಗ್ಯ: ಭಾರತದಲ್ಲಿ ಸುಸ್ಥಿರ ಭವಿಷ್ಯದ ಹಾದಿಗಳು” ಎಂಬ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲುಷಿತ ಗಾಳಿ ಮತ್ತು ನೀರು ಸಮಾಜದ ದುರ್ಬಲ ವರ್ಗಗಳಾದ ಮಹಿಳೆಯರು, ಮಕ್ಕಳು ಮತ್ತು ರೈತರ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ ಎಂದು ತಿಳಿಸಿದ ಡಾ. ಶಾಲಿನಿ ರಜನೀಶ್, “ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಮೊದಲು ‘ವಿಕಸಿತ್ ಪರಿಸರ’ವನ್ನು ನಿರ್ಮಿಸುವುದು ಅನಿವಾರ್ಯ” ಎಂದು ಒತ್ತಿ ಹೇಳಿದರು.
ವಿಜ್ಞಾನಿಗಳು, ನೀತಿ ನಿರೂಪಕರು, ಉದ್ಯಮ ಪ್ರತಿನಿಧಿಗಳು, ಪರಿಸರ ತಜ್ಞರು ಹಾಗೂ ಸಾರ್ವಜನಿಕ ಆರೋಗ್ಯ ವೃತ್ತಿಪರರನ್ನು ಒಂದೆಡೆಗೆ ತಂದು ಹವಾಮಾನ ಬದಲಾವಣೆ ಮತ್ತು ಮಾಲಿನ್ಯದ ಸವಾಲುಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಗ್ರಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಅವರು ಪರಿಸರ ಜಾಗೃತಿಗಾಗಿ ನೀಡಿದ ಸಂಗೀತ ಕೊಡುಗೆಯನ್ನು ಸ್ಮರಿಸಲಾಯಿತು.
“ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಕೆಲಸವಲ್ಲ” ಎಂದು ಡಾ. ಶಾಲಿನಿ ರಜನೀಶ್ ಹೇಳಿದರು. “ಪೀಪಲ್, ಪ್ಲಾನೆಟ್, ಪ್ರೋಗ್ರಾಮ್ (People, Planet, Program – 3Ps)” ಎಂಬ ಸೂತ್ರವನ್ನು ಅಳವಡಿಸಿಕೊಂಡು ಸಾರ್ವಜನಿಕರು ಗ್ರಾಹಕರ ಮನಸ್ಥಿತಿಯಿಂದ ಹೊರಬಂದು ಪರಿಸರದ ರಕ್ಷಕರಾಗಬೇಕಿದೆ. ತ್ಯಾಜ್ಯ ವಿಂಗಡಣೆ, ನೀರಿನ ಸಂರಕ್ಷಣೆ ಮತ್ತು ಸುಸ್ಥಿರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ” ಎಂದು ಕರೆ ನೀಡಿದರು.

ಪ್ರಕೃತಿಯು ಕೇವಲ ಬಳಕೆಯ ವಸ್ತುವಲ್ಲ, ಅದು ನಮ್ಮ ಜೀವದ ಆಧಾರ ಎಂಬುದನ್ನು ಯುವ ಪೀಳಿಗೆ ಅರಿಯಬೇಕಿದೆ. ನವೋದ್ಯಮಗಳು ಮತ್ತು ತಂತ್ರಜ್ಞಾನದ ಮೂಲಕ ಯುವಜನರು ಪರಿಸರ ಬದಲಾವಣೆಯ ಹರಿಕಾರರಾಗಬೇಕು ಎಂದು ಅವರು ತಿಳಿಸಿದರು.
ಪರಿಸರ ರಕ್ಷಣೆ ಪ್ರಗತಿಗೆ ಅಡ್ಡಿಯಲ್ಲ, ಬದಲಿಗೆ ದೀರ್ಘಕಾಲದ ಸಮೃದ್ಧಿಗೆ ಅಡಿಪಾಯವಾಗಿದೆ ಎಂದು ಹೇಳಿದ ಡಾ. ಶಾಲಿನಿ ರಜನೀಶ್, ಭಾರತವು ಸುಸ್ಥಿರ ಅಭಿವೃದ್ಧಿಯಲ್ಲಿ ಜಾಗತಿಕ ನಾಯಕನಾಗಲು ಸರ್ಕಾರ, ವಿಜ್ಞಾನ ಮತ್ತು ಸಮಾಜ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.












