2025-26ರ ಕೇಂದ್ರ ಬಜೆಟ್ ಪ್ರವಾಸೋದ್ಯಮವನ್ನು ಉದ್ಯೋಗ ಆಧಾರಿತ ಬೆಳವಣಿಗೆಗೆ ಮುಖ್ಯ ವಲಯವೆಂದು ಗುರುತಿಸಿದೆ. ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಯುವಜನರ ಕೌಶಲ್ಯ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದು, ಆತಿಥ್ಯ ನಿರ್ವಹಣೆ ಹಾಗೂ ಹೋಂಸ್ಟೇಗಳಿಗೆ ಮುದ್ರಾ ಸಾಲಗಳನ್ನೋದಗಿಸುವುದು, ಪ್ರವಾಸಿ ತಾಣಗಳಿಗೆ ಸುಲಭ ಸಂಚಾರ ವ್ಯವಸ್ಥೆ ಕಲ್ಪಿಸುವುದು, ಸುಧಾರಿತ ಇ-ವೀಸಾ ಸೌಲಭ್ಯಗಳನ್ನು ಪರಿಚಯಿಸುವುದು, ರಾಜ್ಯಗಳಿಗೆ ಕಾರ್ಯಕ್ಷಮತೆ-ಆಧಾರಿತ ಪ್ರೋತ್ಸಾಹ ನೀಡುವುದು ಮುಂತಾದ ಕ್ರಮಗಳನ್ನು ಘೋಷಿಸಿದರು.
ಪ್ರವಾಸೋದ್ಯಮದ ಬೃಹತ್ ಯೋಜನೆ
ದೇಶದ ಅಗ್ರ 50 ಪ್ರವಾಸಿ ತಾಣಗಳನ್ನು ರಾಜ್ಯಗಳ ಸಹಭಾಗಿತ್ವದಲ್ಲಿ ಸ್ಪರ್ಧಾತ್ಮಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ರಾಜ್ಯಗಳು ಭೂಮಿಯನ್ನು ಒದಗಿಸಬೇಕಾಗಿದ್ದು, ಅಲ್ಲಿನ ಹೋಟೆಲ್ ಗಳನ್ನು ಮೂಲಸೌಕರ್ಯ HML ನಲ್ಲಿ ಸೇರಿಸಲಾಗುವುದು. ಆಧ್ಯಾತ್ಮಿಕ ಹಾಗೂ ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಿಗೆ ವಿಶೇಷ ಒತ್ತು ನೀಡಲಾಗುವುದು. ಭಗವಾನ್ ಬುದ್ಧನ ಜೀವನ ಮತ್ತು ಕಾಲಕ್ಕೆ ಸಂಬಂಧಿಸಿದ ಸ್ಥಳಗಳಿಗೆ ವಿಶೇಷ ಗಮನ ನೀಡುವ ಯೋಜನೆ ರೂಪಿಸಲಾಗಿದೆ.
ವೈದ್ಯಕೀಯ ಪ್ರವಾಸೋದ್ಯಮ ಮತ್ತು ‘ಹೀಲ್ ಇನ್ ಇಂಡಿಯಾ’
ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಖಾಸಗಿ ಸಹಭಾಗಿತ್ವವನ್ನು ಹೆಚ್ಚಿನ ಮಟ್ಟದಲ್ಲಿ ಬಳಸಲಾಗುವುದು. ಸಾಮರ್ಥ್ಯ ವರ್ಧನೆ ಮತ್ತು ಸುಲಭ ವೀಸಾ ನಿಯಮಗಳೊಂದಿಗೆ ‘ಹೀಲ್ ಇನ್ ಇಂಡಿಯಾ’ ಯೋಜನೆಯನ್ನು ಬಲಪಡಿಸಲಾಗುವುದು.
ಜ್ಞಾನ ಭಾರತ್ ಮಿಷನ್
1 ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ದಾಖಲು ಮತ್ತು ಸಂರಕ್ಷಿಸಲು ಶೈಕ್ಷಣಿಕ ಸಂಸ್ಥೆಗಳು, ವಸ್ತುಸಂಗ್ರಹಾಲಯಗಳು, ಗ್ರಂಥಾಲಯಗಳು ಮತ್ತು ಖಾಸಗಿ ಸಂಗ್ರಹಕಾರರೊಂದಿಗೆ ಒಡನಾಡಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು. ಪ್ರಾಚೀನ ಜ್ಞಾನ ಹಂಚಿಕೆಗಾಗಿ ಭಾರತೀಯ ಜ್ಞಾನ ವ್ಯವಸ್ಥೆಗಳ ರಾಷ್ಟ್ರೀಯ ಡಿಜಿಟಲ್ ಭಂಡಾರವನ್ನು ಸರ್ಕಾರ ಸ್ಥಾಪಿಸಲು ನಿರ್ಧರಿಸಿದೆ.
ಈ ಸಮಗ್ರ ಯೋಜನೆಗಳು ದೇಶದ ಪ್ರವಾಸೋದ್ಯಮ, ಆರೋಗ್ಯ ಕ್ಷೇತ್ರ ಮತ್ತು ಸಂಸ್ಕೃತಿಯ ಪೋಷಣೆಗೆ ಮಹತ್ತರ ಪಾತ್ರವಹಿಸಲಿವೆ.