ರಾಜ್ಯಕ್ಕೆ ದೂರದೃಷ್ಟಿಯ ನಾಯಕತ್ವ ಬಂದರೆ ವಿಕಸಿತ ಕರ್ನಾಟಕ ಆಗಲಿದೆ: ಬಸವರಾಜ ಬೊಮ್ಮಾಯಿ
ಹಾವೇರಿ (ರಾಣೆಬೆನ್ನೂರು):ದೇಶದಲ್ಲಿ ದೂರದೃಷ್ಟಿಯ ಬಲಿಷ್ಟ ನಾಯಕತ್ವ ಇದೆ. ರಾಜ್ಯದಲ್ಲಿಯೂ ಅದೇ ರೀತಿಯ ದೂರದೃಷ್ಟಿಯ ನಾಯಕತ್ವ ಬಂದರೆ ವಿಕಸಿತ, ವೈಭವದ ಕರ್ನಾಟಕ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ಅವರು ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ನಡೆದ ಕರ್ನಾಟಕ ವೈಭವ ವೈಚಾರಿಕ ಹಬ್ಬ 25 ಕಾರ್ಯಕಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕರ್ನಾಟಕ ವೈಭವ ಒಂದು ವೈಚಾರಿಕ ಹಬ್ಬ. ವೈಚಾರಿಕತೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ” ವೈಚಾರಿಕತೆಯ ಪುನರ್ ಜಾಗರುಕತೆ ಮಾಡಲು ಈ ಕಾರ್ಯಕ್ರಮ ಆಯೋಜನೆ ಮಾಡಿದವರಿಗೆ ಅಭಿನಂದನೆ. ಕರ್ನಾಟಕ ಒಂದು ವಿಶೇಷವಾಗಿರುವ ನಾಡು, ಕರ್ನಾಟಕದ ರೀತಿಯಲ್ಲಿ ಇನ್ನೊಂದು ರಾಜ್ಯ ಇಲ್ಲ. ನೈಸರ್ಗಿಕವಾಗಿ, ಸಂಸ್ಕಾರದಿಂದ, ಪಾರಂಪರವಾಗಿ, ಐತಿಹಾಸಿಕವಾಗಿ ಆಧುನೀಕರಣದಲ್ಲಿ ಈ ರಾಜ್ಯಕ್ಕೆ ಇನ್ನೊಂದು ರಾಜ್ಯ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕನ್ನಡ ಅತ್ಯಂತ ಪುರಾತನ ಭಾಷೆ. ನಮ್ಮ ಪೂರ್ವಜರು ತಮಿಳುಗಿಂತ ಮೊದಲೇ ಕನ್ನಡ ಮಾತನಾಡುತ್ತಿದ್ದರು ಎನ್ನುವ ಶಿಲಾಶಾಸನಗಳು ಸಿಕ್ಕಿವೆ. ಒಂದು ಭಾಷೆ ಸುಮಾರು ಎರಡೂವರೆ ಮೂರು ಸಾವಿರ ವರ್ಷಗಳಿಂದ ಜೀವಂತವಾಗಿದೆ ಎಂದರೆ, ಆ ಭಾಷೆಯ ಮಹತ್ವ, ಆ ಭಾಷೆಯ ತಿರುಳು, ಆ ಭಾಷೆಯ ಸುತ್ತ ಇರುವ ಸಂಸ್ಕೃತಿ ಎಷ್ಟು ಅದ್ಭುತವಾಗಿತ್ತು ಎನ್ನುವ ಕಲ್ಪನೆ ನಾವು ಮಾಡಿಕೊಳ್ಳಬೇಕು. ನೈಸರ್ಗಿಕವಾಗಿ ಸಂಪದ್ಭರಿತವಾಗಿರುವ ನಾಡು, ಪಶ್ಚಿಮದಲ್ಲಿ ಹುಟ್ಟಿರುವ ಎಲ್ಲ ನದಿಗಳು ಪೂರ್ವಕ್ಕೆ ಹರಿಯುತ್ತವೆ. ಕನ್ನಡ ನಾಡಿನ ಉದ್ದಗಲಕ್ಕೂ ಹರಿದು ಕನ್ನಡ ನಾಡಿನ ರೈತರ ಹೊಲಕ್ಕೆ ಅಮೃತ ನೀಡಿ ಹೋಗುತ್ತವೆ. ಬೇರೆ ರಾಜ್ಯಗಳಲ್ಲಿ ಹಾಗೆ ಇಲ್ಲ. ಪಶ್ಚಿಮದ ನದಿಗಳು ಪಶ್ಚಿಮಕ್ಕೆ ಪೂರ್ವದ ನದಿಗಳು ಪೂರ್ವಕ್ಕೆ ಹರಿಯುತ್ತವೆ. ಕರ್ನಾಟಕದಲ್ಲಿ ಅದ್ಭುತವಾದ ಕಾಡಿದೆ. ವಿಶಾಲವಾದ ಬಯಲು ಸೀಮೆ ಇದೆ. ಅತಿ ಹೆಚ್ಚು ವೈವಿದ್ಯತೆ ಇರುವ ನಾಡು ಕರ್ನಾಟಕ. ಹಸಿರು ಸಂಪತ್ತು ಇರುವ ನಾಡು, ಎಲ್ಲ ರೀತಿಯ ಬೆಳೆ ಸಂಪತ್ತು ಇಲ್ಲಿ ಬೆಳೆಯತ್ತದೆ. ಇದಕ್ಕೆ ದೊಡ್ಡ ಸಂಸ್ಕೃತಿ ಇದೆ ಎಂದು ಹೇಳಿದರು.
ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ನಾಗರಿಕತೆ ಬೆಳೆದಿದೆ. ನಾಗರೀಕತೆಗೂ ಸಂಸ್ಕೃತಿಗೂ ವ್ಯತ್ಯಾಸ ಇದೆ. ಮೊದಲು ಸೈಕಲ್ ಇತ್ತು. ಬಸ್ಸು, ಕಾರು ಬಂದಿದೆ. ಮನೆಯಲ್ಲಿ ಬೀಸಿಕಲ್ಲು ಇತ್ತು ಈಗ ಮಿಕ್ಕಿ ಬಂದಿದೆ. ಇದೆಲ್ಲ ನಾಗರೀಕತೆ. ನಮ್ಮ ಹತ್ತಿರ ಏನಿದೆಯೋ ಅದು ನಾಗರಿಕತೆ ನಾವೇನಾಗಿದ್ದೇವೆ ಅದು ಸಂಸ್ಕೃತಿ. ಈ ನೈಸರ್ಗಿಕ ಸಂಪತ್ತನ್ನು ಪಡೆದು ಏನು ಆಗಿದ್ದೇವೆ ಎನ್ನುವುದು ಚಿಂತನೆ ಮಾಡುವುದು ಕರ್ನಾಟಕ ವೈಭವ. ಕನ್ನಡಿಗರು ಯಾವುದರಲ್ಲೂ ಹಿಂದೆ ಇಲ್ಲ. ಅವಕಾಶ ಸಿಕ್ಕರೂ ಸಾಧಿಸುತ್ತಾರೆ. ಚಾಲೆಂಜಿಂಗ್ ಆದರೂ ಸಾಧಿಸುತ್ತಾರೆ. ನಾವು ನಮ್ಮ ಸಾಧನೆಯನ್ನು ವೈಭವೀಕರಿಸಿಕೊಳ್ಳುವುದಿಲ್ಲ. ಇದೇ ಐಟಿ ಬಿಟಿ, ಇದೇ ಸಂಸ್ಕೃತಿ ಬೇರೆ ರಾಜ್ಯಗಳಲ್ಲಿ ಇದ್ದಿದ್ದರೆ ಅದು ಬೇರೆಯೇ ಆಗುತ್ತಿತ್ತು. ಕರ್ನಾಟಕ ಕನ್ನಡ ಪರಂಪರೆ ಬಗ್ಗೆ ನಾವು ಹೆಮ್ಮೆ ಪಡಬೇಕು. ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.
ದಾಸ ಸಾಹಿತ್ಯದ ನೆಲೆಬೀಡು
ಕನ್ನಡ ನಾಡಿನಲ್ಲಿ ಸಮಾನತೆ, ಸಂತೃಪ್ತಿ, ಶಾಂತಿ, ಸಮಗ್ರತೆ ನಮ್ಮ ಹುಟ್ಟುಗುಣ. ರಾಜಕಾರಣಕ್ಕಾಗಿ ನಾವು ಬೇರೆ ಬೇರೆ ವಿಶ್ಲೇಷಣೆ ಮಾಡಬಹುದು. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಇಡೀ ಮನುಕುಲಕ್ಕೆ ಕೊಟ್ಟಿದ್ದು, ಬದುಕಿನ ಆಯಾಮಗಳನ್ನು ಹೇಗೆ ಸವಿಯಬೇಕು, ಬದುಕನ್ನು ಹೇಗೆ ಶ್ರೀಮಂತಗೊಳಿಸಬೇಕು ಎನ್ನುವುದು ವಚನ ಹಾಗೂ ದಾಸ ಸಾಹಿತ್ಯದಲ್ಲಿದೆ. ನಮ್ಮ ಜಿಲ್ಲೆ ದಾಸ ಸಾಹಿತ್ಯದ ನೆಲೆ ಬೀಡು, ಕನಕದಾಸರು, ಶಿಶುನಾಳ ಶರೀಫರು, ಸರ್ವಜ್ಞ, ಗಳಗನಾಥರು ಹುಟ್ಟಿದ್ದು ಇಲ್ಲಿಯೇ. ಪ್ರತಿಯೊಂದು ನದಿಯ ಸಂಸ್ಕೃತಿಯ ಬಗ್ಗೆ ನಾವು ಅಧ್ಯಯನ ಮಾಡಬೇಕು. ಕೃಷ್ಣಾ ನದಿಯ ಸಂಸ್ಕೃತಿಯೇ ಬೇರೆ, ತುಂಗಭದ್ರಾ ನದಿಯ ಸಂಸ್ಕೃತಿಯೇ ಬೇರೆ, ಕಾವೇರಿ ನದಿಯ ಸಂಸ್ಕೃತಿಯ ಬೇರೆ. ಈ ಬಗ್ಗೆ ಅಧ್ಯಯನ ಆಗಬೇಕು ಎಂದರು.
ನಮ್ಮ ಪಧಾನಿ ನರೇಂದ್ರ ಮೋದಿಯವರು 2047 ಕ್ಕೆ ವಿಕಸಿತ ಭಾರತ ಆಗಬೇಕು ಎಂದು ಹೇಳಿದ್ದಾರೆ. ಅದಕ್ಕಾಗಿ ಅವರು ಈಗಿನಿಂದಲೇ ಕೆಲಸ ಮಾಡುತ್ತಿದ್ದಾರೆ. ಒಬ್ಬ ಪತಿಪಕ್ಷದ ನಾಯಕರು ಮೋದಿಯವರೇ 2047 ಕ್ಕೆ ನೀವೂ ಇರೋದಿಲ್ಲ ನಾವೂ ಇರೋದಿಲ್ಲ. ಈಗೇಕೆ ಆ ಮಾತನಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು. ನಾನು ನನ್ನ ಭಾಷಣದಲ್ಲಿ ಹೇಳಿದೆ. ನಾವಿಲ್ಲದಿದ್ದರೂ, ಈ ದೇಶ ಇರುತ್ತದೆ. ಈ ದೇಶದ ಮುಂದಿನ ಪೀಳಿಗೆ ಇರುತ್ತದೆ ಎಂದು ಹೇಳಿದೆ. ಮುಂದೆ ಇತಿಹಾಸದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದರಲ್ಲಿ ಯಾವುದರಲ್ಲಾದರೂ ನಿಮ್ಮ ಹೆಸರು ಇರುತ್ತದೆ ಎಂದು ಹೇಳಿದೆ ಎಂದರು.
ಹೆಚ್ಚು ಸಾಲ ದುರ್ದೈವ
ಕರ್ನಾಟಕ ಇಷ್ಟೊಂದು ಶ್ರೀಮಂತ ರಾಜ್ಯವಾಗಿದ್ದರೂ, ಅತಿ ಹೆಚ್ಚು ಸಾಲ ಮಾಡಿರುವುದು ದುರ್ದೈವ. ಕಳೆದ ವರ್ಷ 1 ಲಕ್ಷ 5 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಅದಕ್ಕೂ ಹಿಂದಿನ ವರ್ಷ 1.5 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಇಷ್ಟೆಲ್ಲ ಸಾಲ ಮಾಡಿದರೂ ರೈತರು ಸಾಮಾನ್ಯರ ಬದುಕು ಉತ್ತಮಗೊಂಡಿದಿಯಾ, ದೀನ ದಲಿತರ ಬದುಕು ಹಸನಾಗಿದಿಯಾ, ಮಹಿಳೆಯರ ಸ್ಥಿತಿ ಉತ್ತಮಗೊಂಡಿದೆಯಾ ಬಡವರ ಬದಕು ಸುಧಾರಿಸಿದೆಯಾ, ಕಲ್ಯಾಣ ರಾಜ್ಯ ಮಾಡುವ ಪೂರಕವಾಗಿರುವ ಆಡಳಿತ ಬದ್ಧತೆ ಮತ್ತು ಕಾರ್ಯಕ್ರಮದ ಮೂಲಕ ಸಂಪನ್ಮೂಲ ಬಳಕೆ ಮಾಡಿಕೊಂಡು ಆಡಳಿತ ಮಾಡಬೇಕಾಗುತ್ತದೆ. ಜನಪರವಾಗಿರುವ ಸಂಪನ್ಮೂಲ ಬಳಕೆ ಮಾಡಿ ರಾಜ್ಯವನ್ನು ಶ್ರೀಮಂತ ಮಾಡಬೇಕು. ಅದಕ್ಕೆ ನಮ್ಮ ಪ್ರಧಾನಿಗಳು ವಿರಾಸತ್ ಮತ್ತು ವಿಕಾಸತ್ ಅಂತ ಹೇಳುತ್ತಾರೆ. ಸರ್ಕಾರ ಶ್ರೀಮಂತವಾಗುವುದಲ್ಲ, ಜನರನ್ನು ಶ್ರೀಮಂತರನ್ನಾಗಿ ಮಾಡಬೇಕು. ಆರ್ಥಿಕ ಸಬಲೀಕರಣ ಆಗಬೇಕು. ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕೊಟ್ಟಿರುವುದು ಜನರನ್ನು ಶ್ರೀಮಂತರನ್ನಾಗಿ ಮಾಡುವ ಬಜೆಟ್, ಎಲ್ಲ ಜನರ ಶ್ರೇಯೋಭಿವೃದ್ಧಿ ಮೂಲಕ ದೇಶ ಅಭಿವೃದ್ಧಿ ಆಗಲಿದೆ. ದೇಶದಲ್ಲಿ ದೂರದೃಷ್ಟಿಯ ಬಲಿಷ್ಟ ನಾಯಕತ್ವ ಇದೆ. ರಾಜ್ಯದಲ್ಲಿಯೂ ಅದೇ ರೀತಿಯ ದೂರದೃಷ್ಟಿಯ ನಾಯಕತ್ವ ಬಂದರೆ ವಿಕಸಿತ, ವೈಭವದ ಕರ್ನಾಟಕ ಆಗಲಿದೆ. ನಮ್ಮ ವಿರಾಸತ್ ಸಂಸ್ಕೃತಿ ಹೆಚ್ಚಿನ ರೀತಿಯಲ್ಲಿ ಬೆಳೆಯಲಿ, ಈ ಚಿಂತನ ಮಂಥನ ಮುಂದಿನ
ವಿಕಸಿತಕ್ಕೆ ಮಾರ್ಗದರ್ಶನ ಆಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪದ್ಮಶ್ರೀ ಮಂಜಮ್ಮ ಜೋಗತಿ, ಹಿಂದೂಸ್ತಾನಿ ಗಾಯಕಿ ಸಂಗೀತಾ ಕಟ್ಟಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.