ಬೆಂಗಳೂರು: ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ (ಕೆಪಿಎಸ್‌ಸಿ) ಪರೀಕ್ಷಾ ವ್ಯವಸ್ಥೆಯ ಅವ್ಯವಸ್ಥೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಪ್ರಶ್ನೆ ಪತ್ರಿಕೆ ದೋಷ, ಅನುವಾದದ ಅರ್ಥಹೀನತೆ, ಪರೀಕ್ಷಾ ವೇಳಾಪಟ್ಟಿ ಗೊಂದಲ, ಹಾಗೂ ಫಲಿತಾಂಶದಲ್ಲಿ ತಾರತಮ್ಯ – ಈ ಎಲ್ಲಾ ಸಮಸ್ಯೆಗಳ ಕಾರಣದಿಂದ ವಿದ್ಯಾರ್ಥಿಗಳು ಕೆಪಿಎಸ್‌ಸಿ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ.
ಪ್ರತಿ ಬಾರಿ ಪರೀಕ್ಷೆ ನಡೆಸಿದಾಗಲೂ ಪುನಃಪರೀಕ್ಷೆ, ಪ್ರಶ್ನೆಪತ್ರಿಕೆ ಸೋರಿಕೆ, ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಸಾಮಾನ್ಯವಾಗಿದೆ. ಈ ಎಲ್ಲಾ ಅವ್ಯವಸ್ಥೆಗಳನ್ನು ಪ್ರಶ್ನಿಸುವ ವಿದ್ಯಾರ್ಥಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ, ಅವರ ಕೂಗಿಗೆ ಕಾಂಗ್ರೆಸ್ ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂಬುದು ವಿದ್ಯಾರ್ಥಿಗಳ ಆಕ್ರೋಶ.
ಪರೀಕ್ಷಾರ್ಥಿಗಳ ಪ್ರಕಾರ, ಪ್ರತಿಭಾವಂತ ಅಭ್ಯರ್ಥಿಗಳಿಗೆ ಈ ಅವ್ಯವಸ್ಥೆ ಪ್ರತಿಬಾರಿ ಅನ್ಯಾಯ ಮಾಡುತ್ತಿದೆ. ಸರ್ಕಾರ ಈ ಸಮಸ್ಯೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ರಾಜ್ಯ ಸರ್ಕಾರ ಈಗಲಾದರೂ ಎಚ್ಚರಗೊಂಡು ಕೆಪಿಎಸ್‌ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆಗಳನ್ನು ತರಬೇಕು. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಈ ಪ್ರಶ್ನೆಯೊಂದಿಗೆ ಸಂಬಂಧಿತವಾಗಿದ್ದು, ಸರ್ಕಾರದ ಜವಾಬ್ದಾರಿಯಾಗಿದೆ.