ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ರೂಪಿಸಲಾದ SCSP-TSP ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಸಮಾಜ ಕಲ್ಯಾಣ ಸಚಿವ ಡಾ. ಎಚ್. ಸಿ. ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದ ಸಭಾಂಗಣ ಸಂಖ್ಯೆ 334ರಲ್ಲಿ 2025-26ನೇ ಸಾಲಿನ ಕ್ರಿಯಾ ಯೋಜನೆ ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, “ಸರ್ಕಾರದ ಎರಡು ವರ್ಷದ ಆಡಳಿತದ ಬಳಿಕವೂ ಕೆಲವು ಇಲಾಖೆಗಳು SCSP-TSP ಕಾಯ್ದೆಯ ಆಶಯಗಳನ್ನು ಪೂರೈಸುವಲ್ಲಿ ವಿಫಲವಾಗಿವೆ. ಇದು ನನ್ನಲ್ಲಿ ಬೇಸರ ಮೂಡಿಸಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡದಿದ್ದರೆ, ಅಂತವರ ವಿರುದ್ಧ ಪ್ರಕರಣ ದಾಖಲಿಸಲು ಹಿಂಜರಿಯುವುದಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದರು.
ಸುಮಾರು 8 ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಸರ್ಕಾರದ 34 ಇಲಾಖೆಗಳಾದ ಕೃಷಿ, ನೀರಾವರಿ, ವಸತಿ, ಕೈಗಾರಿಕೆ, ಸಹಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಂಧನ, ಸಾರಿಗೆ, ರೇಷ್ಮೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಮಾಜ ಕಲ್ಯಾಣ, ಉನ್ನತ ಶಿಕ್ಷಣ ಇತ್ಯಾದಿಗಳಿಂದ ಪರಿಶಿಷ್ಟ ಸಮ UDಾಯಗಳಿಗೆ ನೀಡಿರುವ ಅನುದಾನದ ಬಳಕೆಯ ಕುರಿತು ಚರ್ಚಿಸಲಾಯಿತು.
ಸಚಿವರು, ಸರ್ಕಾರದ ಗ್ಯಾರಂಟಿ ಯೋಜನೆಗಳು, ವಿಶೇಷವಾಗಿ ಪರಿಶಿಷ್ಟ ಮಹಿಳೆಯರ ಬದುಕಿನಲ್ಲಿ ತಂದಿರುವ ಗುಣಾತ್ಮಕ ಬದಲಾವಣೆಗಳ ಕುರಿತು ನಿಖರ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಾಜಿ ದೇವದಾಸಿ ಮಹಿಳೆಯರ ಕುಟುಂಬಗಳ ಶಿಕ್ಷಣ, ಆರೋಗ್ಯ, ಮತ್ತು ಔದ್ಯೋಗಿಕ ಅವಕಾಶಗಳಿಗಾಗಿ 54 ಲಕ್ಷ ಮತ್ತು 16 ಲಕ್ಷ ರೂಪಾಯಿಗಳನ್ನು ಮೀಸಲಿಡುವ ಕುರಿತು ಚರ್ಚೆ ನಡೆಸಲಾಯಿತು.
ಪರಿಶಿಷ್ಟ ಸಮುದಾಯದ ಮಕ್ಕಳು ಓದುವ ವಸತಿ ಶಾಲೆಗಳ ವಿದ್ಯುತ್ ವೆಚ್ಚವನ್ನು ಇಂಧನ ಇಲಾಖೆಯಿಂದ ಭರಿಸುವ ಬಗ್ಗೆಯೂ ಸಚಿವರು ಪ್ರಸ್ತಾಪಿಸಿದರು. ಜೊತೆಗೆ, GKVK ಕೃಷಿ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಸಂಶೋಧನಾ ಕೇಂದ್ರ ಸ್ಥಾಪಿಸಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೃಷಿ ಮತ್ತು ನೀರಾವರಿಗೆ ಸಂಬಂಧಿಸಿದ ದೂರದೃಷ್ಟಿಯನ್ನು ಪ್ರಚುರಪಡಿಸುವಂತೆ ತಿಳಿಸಿದರು.
ಪರಿಶಿಷ್ಟ ಪಂಗಡದ ಜನರಿಗೆ ಭೂಮಿ ಮಂಜೂರಾತಿ ಮಾಡಿದ್ದು, ಅವರಿಗೆ ವಸತಿ ಸೌಲಭ್ಯ ಕಲ್ಪಿಸುವ ಕುರಿತು ಚಿಂತನೆ ನಡೆಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಅಂಬೇಡ್ಕರ್ ಅವರ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಸಚಿವರು ಸೂಚಿಸಿದರು.
“ಪರಿಶಿಷ್ಟ ಸಮುದಾಯದ ಏಳಿಗೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಆದರೆ, ಇವುಗಳ ಪ್ರತಿಫಲನ ಸಮುದಾಯದ ಬದುಕಿನಲ್ಲಿ ಕಾಣದಿರುವುದು ಆತಂಕಕಾರಿ. ಇದಕ್ಕೆ ಸರ್ಕಾರ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು” ಎಂದು ಸಚಿವರು ಒತ್ತಿ ಹೇಳಿದರು.
ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ಪರಿಶಿಷ್ಟರಿಗೆ ನೀಡಿರುವ ಸೌಲಭ್ಯಗಳ ನಿಖರ ದತ್ತಾಂಶ ಸಂಗ್ರಹಿಸಿ, ಸಹಿ ಮಾಡಿ ಧೃಢೀಕರಿಸಬೇಕೆಂದು ಸೂಚಿಸಿದ ಸಚಿವರು, ವಸತಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಪರಿಶಿಷ್ಟರ ವಸತಿ ಸಮಸ್ಯೆಗೆ ಕೊನೆಗಾಣಿಸಬೇಕೆಂದು ತಿಳಿಸಿದರು.
ದೀರ್ಘಕಾಲದ ಖಾಯಿಲೆಯಿಂದ ಬಳಲುವ ಪರಿಶಿಷ್ಟ ಸಮುದಾಯದ ರೋಗಿಗಳಿಗೆ ವೈದ್ಯರ ಪತ್ರದ ಆಧಾರದಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವಂತೆಯೂ ಸಚಿವರು ಆದೇಶಿಸಿದರು. ತೋಟಗಾರಿಕೆ, ಪಶುಸಂಗೋಪನೆ, ಮತ್ತು ರೇಷ್ಮೆ ಇಲಾಖೆಗಳ ಮೂಲಕ ಉತ್ಪಾದನೆ ಮತ್ತು ಔದ್ಯೋಗಿಕ ಅವಕಾಶಗಳನ್ನು ಸೃಷ್ಟಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
SCSP-TSP ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿ ಹಣ ಖರ್ಚಾದ ಬಗ್ಗೆ ಚರ್ಚಿಸಿ, ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವರು ಆದೇಶಿಸಿದರು.
ಸಭೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕೀಹೊಳಿ, ಸಮಾಜ ಕಲ್ಯಾಣ ಇಲಾಖೆಯ ಸಲಹೆಗಾರ ವೆಂಕಟಯ್ಯ ಉಪಸ್ಥಿತರಿದ್ದರು.