ಬೆಂಗಳೂರು: ZEE5 ಒಟಿಟಿಯಲ್ಲಿ ಕನ್ನಡದ ಮೊದಲ ಮಿನಿ ವೆಬ್ ಸರಣಿ ‘ಅಯ್ಯನ ಮನೆ’ ಭರ್ಜರಿ ಯಶಸ್ಸು ಕಂಡಿದ್ದು, 50 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಗಳ ವೀಕ್ಷಣೆಯೊಂದಿಗೆ ದಾಖಲೆ ಬರೆದಿದೆ. ಏಪ್ರಿಲ್ 25, 2025 ರಂದು ಸ್ಟ್ರೀಮಿಂಗ್ ಆರಂಭವಾದ ಈ ಸರಣಿ, ಭಾಷಾ ಗಡಿಗಳನ್ನು ಮೀರಿ ಪ್ರಾದೇಶಿಕ ಭಾಷೆಯ ವೆಬ್ ಸರಣಿಗೆ ಅಪೂರ್ವ ಸ್ಪಂದನೆ ಗಳಿಸಿದೆ.
ZEE ಕನ್ನಡ ತನ್ನ ನವೀನ ಕಾರ್ಯಕ್ರಮಗಳ ಮೂಲಕ ಕಿರುತೆರೆಯಲ್ಲಿ ಮನೆಮಾತಾಗಿದ್ದು, ZEE5 ಒಟಿಟಿಯಲ್ಲಿ ಸದಾಭಿರುಚಿಯ ಕಂಟೆಂಟ್ ನೀಡುತ್ತಿದೆ. ಕನ್ನಡದಲ್ಲಿ ಮೊದಲ ಬಾರಿಗೆ ಮಿನಿ ವೆಬ್ ಸರಣಿಯ ಪರಿಕಲ್ಪನೆಯನ್ನು ಪರಿಚಯಿಸಿದ ZEE5, ‘ಅಯ್ಯನ ಮನೆ’ ಮೂಲಕ ಭಾರೀ ಜನಮನ್ನಣೆ ಪಡೆದಿದೆ.
ಕಥೆಯ ಸಾರಾಂಶ
ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಚಿತ್ರೀಕರಿಸಲಾದ ‘ಅಯ್ಯನ ಮನೆ’ ಒಂದು ನಿಗೂಢ, ಸಸ್ಪೆನ್ಸ್ ತುಂಬಿದ ಥ್ರಿಲ್ಲರ್ ಕಥೆ. ಜಾಜಿ (ಖುಷಿ ರವಿ) ತನ್ನ ಗಂಡನ ಮನೆಗೆ ಸೊಸೆಯಾಗಿ ಕಾಲಿಡುವ ಕ್ಷಣದಲ್ಲಿ ಅವಳ ಮಾವ ಕೊನೆಯುಸಿರೆಳೆಯುತ್ತಾನೆ. ಇದು ಕಾಕತಾಳೀಯವೇ, ಜಾಜಿಯ ಕಾಲಗುಣವೇ, ಅಥವಾ ಇನ್ನಾವುದೋ ರಹಸ್ಯವೇ? ಮನೆಯಲ್ಲಿ ನಡೆಯುವ ಸರಣಿ ಸಾವುಗಳು, ಪೂಜಾರಿಯ ಭವಿಷ್ಯವಾಣಿ, ಮತ್ತು ಅತ್ತೆ ನಾಗಲಂಬಿಕೆಯ ವರ್ತನೆ ಜಾಜಿಯ ಆತಂಕವನ್ನು ಗಗನಕ್ಕೇರಿಸುತ್ತದೆ. ಈ ಸಾವುಗಳ ಹಿಂದಿನ ಕಾರಣವೇನು? ದುಷ್ಯಂತನ ಸಹೋದರರ ಉದ್ದೇಶವೇನು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ‘ಅಯ್ಯನ ಮನೆ’ ವೀಕ್ಷಿಸಲೇಬೇಕು.
ತಂಡದ ಸಂತಸ
ಜಾಜಿ ಪಾತ್ರದಲ್ಲಿ ಮಿಂಚಿರುವ ನಟಿ ಖುಷಿ ರವಿ, “ಈ ಸರಣಿಯ ಭಾಗವಾಗಿರುವುದು ಅವಿಸ್ಮರಣೀಯ ಅನುಭವ. ಸವಾಲಿನ ಈ ಪಾತ್ರವನ್ನು ಚಿತ್ರಿಸಿದ್ದು ಈಗ ಫಲ ನೀಡಿದೆ. ಕಡಿಮೆ ಅವಧಿಯಲ್ಲಿ 50 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ ದಾಖಲೆ ಖುಷಿ ಕೊಟ್ಟಿದೆ. ZEE5 ಮತ್ತು ಶ್ರುತಿ ನಾಯ್ಡು ಪ್ರೊಡಕ್ಷನ್ಸ್ಗೆ ಕೃತಜ್ಞೆ,” ಎಂದಿದ್ದಾರೆ.
ನಿರ್ದೇಶಕ ರಮೇಶ್ ಇಂದಿರಾ, “ಭಯ, ನಂಬಿಕೆ, ಕುಟುಂಬದ ಒಡಲಾಟವನ್ನು ಪ್ರತಿಬಿಂಬಿಸುವ ಈ ಕಥೆಗೆ ಈ ರೀತಿಯ ಸ್ಪಂದನೆ ಸಿಕ್ಕಿರುವುದು ಆನಂದದಾಯಕ. ಖುಷಿ, ಅಕ್ಷಯ್, ಮಾನಸಿ ಮತ್ತು ಇಡೀ ತಂಡದ ಕೊಡುಗೆ ಅಮೂಲ್ಯ. ZEE5ನ ಬೆಂಬಲದಿಂದ ಈ ಕಥೆ ಜೀವಂತವಾಗಿದೆ,” ಎಂದು ಹೇಳಿದ್ದಾರೆ.
ತಾರಾಗಣ ಮತ್ತು ತಾಂತ್ರಿಕತೆ
ಶ್ರುತಿ ನಾಯ್ಡು ಪ್ರೊಡಕ್ಷನ್ಸ್ ನಿರ್ಮಾಣದ ಈ ಏಳು ಎಪಿಸೋಡ್ಗಳ ಸರಣಿಯಲ್ಲಿ ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ಸೇರಿದಂತೆ ಹಲವು ಕಲಾವಿದರು ಅಮೋಘವಾಗಿ ನಟಿಸಿದ್ದಾರೆ. ರಮೇಶ್ ಇಂದಿರಾ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸರಣಿ, ಕುಟುಂಬ ಸಮೇತ ವೀಕ್ಷಿಸಬಹುದಾದ ಒಂದು ರೋಚಕ ಅನುಭವವನ್ನು ಒಡ್ಡುತ್ತದೆ.
‘ಅಯ್ಯನ ಮನೆ’ ಕನ್ನಡದ ವೆಬ್ ಸರಣಿಗಳಿಗೆ ಹೊಸ ಒರೆಗಲ್ಲು ಸೃಷ್ಟಿಸಿದ್ದು, ZEE5ನಲ್ಲಿ ಇದೀಗ ಸ್ಟ್ರೀಮಿಂಗ್ ಆಗುತ್ತಿದೆ.