ಮೈಸೂರು: ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್‌ಆರ್ ಗ್ರೂಪ್‌ನ ಮೈಸೂರು ವಾರಿಯರ್ಸ್ ಮಹಿಳಾ ಕ್ರಿಕೆಟ್ ತಂಡವು ಚೊಚ್ಛಲ ಮಹಾರಾಣಿ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಗಾಗಿ ತನ್ನ ನಾಯಕಿಯಾಗಿ ಶುಭಾ ಸತೀಶ್‌ರನ್ನು ಘೋಷಿಸಿದೆ. ಜೊತೆಗೆ 15 ಆಟಗಾರ್ತಿಯರ ಸಂಪೂರ್ಣ ತಂಡವನ್ನು ಪರಿಚಯಿಸಿದೆ.
ಮೈಸೂರಿನ ರೀಜೆಂಟಾ ಸೆಂಟ್ರಲ್ ಜವಾಜಿಯಲ್ಲಿ ಶನಿವಾರ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಭಾರತ ತಂಡದ ಟೆಸ್ಟ್ ಕ್ರಿಕೆಟ್ ಆಟಗಾರ್ತಿ ಶುಭಾ ಸತೀಶ್‌ರನ್ನು ತಂಡದ ನಾಯಕಿಯಾಗಿ ನೇಮಿಸಲಾಯಿತು. ಈ ಸಂದರ್ಭದಲ್ಲಿ 16 ಆಟಗಾರ್ತಿಯರ ತಂಡವನ್ನು ಘೋಷಿಸಲಾಯಿತು ಮತ್ತು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಂಯೋಜಿಸಿರುವ ತಂಡದ ಆಂಥಮ್‌ನ್ನು ಬಿಡುಗಡೆ ಮಾಡಲಾಯಿತು.
ಮೈಸೂರು ವಾರಿಯರ್ಸ್‌ನ ಮಾಲೀಕರು ಹಾಗೂ ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅರ್ಜುನ್ ರಂಗಾ ಮಾತನಾಡಿ, “ಮಹಾರಾಣಿ ಟ್ರೋಫಿಯ ಚೊಚ್ಛಲ ಆವೃತ್ತಿಯಲ್ಲಿ ನಮ್ಮ ಮಹಿಳಾ ತಂಡವನ್ನು ಪ್ರತಿನಿಧಿಸಲಿರುವ ಆಟಗಾರರ ಘೋಷಣೆ ಸಂತಸ ತಂದಿದೆ. ಶುಭಾ ಸತೀಶ್‌ರಂತಹ ಭಾರತ ತಂಡದ ಆಟಗಾರ್ತಿ ನಮ್ಮ ನಾಯಕಿಯಾಗಿರುವುದು ಹೆಮ್ಮೆಯ ವಿಷಯ. ಮಹಿಳಾ ಕ್ರಿಕೆಟ್‌ಗೆ ಕೊಡುಗೆ ನೀಡಲು ನಾವು ಬದ್ಧರಾಗಿದ್ದೇವೆ,” ಎಂದರು.
ತಂಡವು ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಮೈಸೂರಿನ ಕೇರ್ಗಳ್ಳಿಯ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದೊಂದಿಗೆ ಪಾಲುದಾರಿಕೆ ಘೋಷಿಸಿದೆ. ಈ ಒಡಂಬಡಿಕೆಯಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯದ ಬಾಲಕಿಯರಿಗೆ ಗುಣಮಟ್ಟದ ಕ್ರೀಡಾ ಸಲಕರಣೆಗಳನ್ನು ಒದಗಿಸಿ, ಶಿಕ್ಷಣ ಮತ್ತು ಕ್ರೀಡೆಯ ಮೂಲಕ ಅವರ ಸಬಲೀಕರಣಕ್ಕೆ ತಂಡವು ಬದ್ಧವಾಗಿದೆ. ಈ ವಿದ್ಯಾಲಯದ ವಿದ್ಯಾರ್ಥಿನಿಯರು ಈಗ ಉತ್ತಮ ಕ್ರೀಡಾ ಸೌಲಭ್ಯಗಳೊಂದಿಗೆ ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ತಯಾರಿ ನಡೆಸಬಹುದು.
ಮಹಾರಾಣಿ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಯು ಆಗಸ್ಟ್ 5ರಿಂದ 10ರವರೆಗೆ ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಸ್ಪರ್ಧಿಸಲಿವೆ. ಮೈಸೂರು ವಾರಿಯರ್ಸ್ ತಂಡವನ್ನು ಮುಖ್ಯ ಕೋಚ್ ಕರುಣಾ ಜೈನ್ ಮುನ್ನಡೆಸಲಿದ್ದಾರೆ.
ಈ ಪಂದ್ಯಾವಳಿಯನ್ನು ಬ್ಯಾಟ್ ಬ್ರಿಕ್ಸ7, ಕ್ಯಾಂಪಾ, ಸಂಕಲ್ಪ, 360 ಒನ್, ಸಿಂಪೋಲೊ, ಕೊನೆ ಮತ್ತು ಭಾರತ್ ಇಂಟರ್‌ನ್ಯಾಷನಲ್ ಟ್ರಾವೆಲ್ಸ್ (ಬಿಐಟಿ) ಬೆಂಬಲಿಸುತ್ತಿವೆ.












