ಬಡವರಿಗೆ ದ್ರೋಹ, ಹೊಟೇಲ್‌ಗಳು ಬಂದ್ ಆಗುತ್ತಿವೆ ಎಂದು ಆರೋಪ
ಬೆಂಗಳೂರು: ಕೇಂದ್ರ ಸರ್ಕಾರ ಜನಸಾಮಾನ್ಯರ ನೋವನ್ನು ಅರ್ಥಮಾಡಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗಾಂಧಿನಗರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ. ಆದಾಯ ಪಾತಳಿಗೆ ಕುಸಿದಿದೆ. ಬೆಲೆ ಏರಿಕೆಗೆ ಹೊಣೆ ಯಾರು?” ಎಂದು ಪ್ರಶ್ನಿಸಿದರು.
ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಭಾರೀ ಹೊರೆ ಬಿದ್ದಿದೆ ಎಂದು ಆರೋಪಿಸಿದ ಶಿವಕುಮಾರ್, “ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳದ ಹೊರೆ ಸಾಮಾನ್ಯರ ಮೇಲೆಯೇ ಬೀಳುತ್ತಿದೆ. ಇದರಿಂದಾಗಿ ಅನೇಕ ಹೊಟೇಲ್‌ಗಳು ಬಂದ್ ಆಗುತ್ತಿವೆ. ಕೇಂದ್ರ ಸರ್ಕಾರ ಇದರತ್ತ ಗಮನ ಹರಿಸಬೇಕು. ಜನರ ಮೇಲಿನ ಹೊರೆಯನ್ನು ಇಳಿಸಬೇಕು” ಎಂದರು.
ಬಡವರಿಗೆ ದ್ರೋಹ ಬಗೆಯುತ್ತಿದೆ ಕೇಂದ್ರ
“ಕೇಂದ್ರ ಸರ್ಕಾರ ಬೆಲೆ ಏರಿಕೆ ಮೂಲಕ ಬಡವರಿಗೆ ದ್ರೋಹ ಬಗೆಯುತ್ತಿದೆ. ಪಂಚ ರಾಜ್ಯಗಳ ಚುನಾವಣೆ ಮುಗಿಯುವವರೆಗೂ ಕಾಯುತ್ತಿದ್ದು, ಈಗ ಬೆಲೆ ಏರಿಕೆ ಮಾಡಿ ಜನರನ್ನು ವಂಚಿಸಿದೆ” ಎಂದು ಆರೋಪಿಸಿದ ಅವರು, “ಉಜ್ವಲ ಯೋಜನೆಯಲ್ಲಿ ಸೌದೆ ಒಲೆ ಕೊಡುತ್ತೇವೆ ಎಂದು ಪ್ರಚಾರ ಮಾಡಿದರು. ಈಗ ಸುಮಾರು ಸಾವಿರ ರೂಪಾಯಿ ಬೆಲೆ ಏರಿಕೆ ಮಾಡಿದ್ದಾರೆ. ಜನ ಹೇಗೆ ಬದುಕುವುದು?” ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಜನರಿಗೆ ಐದು ಗ್ಯಾರಂಟಿ ಯೋಜನೆಗಳ ಮೂಲಕ ನೆರವು ನೀಡುತ್ತಿದ್ದು, ಒಂದೂವರೆ ಕೋಟಿ ಕುಟುಂಬಗಳು ಇದರ ಲಾಭ ಪಡೆಯುತ್ತಿವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ರಾಜ್ಯ ಬಿಜೆಪಿ ನಾಯಕರು ‘ಬೊಗಳೆ ದಾಸರು’
ರಾಜ್ಯ ಬಿಜೆಪಿ ನಾಯಕರಾದ ವಿಜಯೇಂದ್ರ ಮತ್ತು ಅಶೋಕ್ ಅವರನ್ನು ತೀವ್ರವಾಗಿ ಟೀಕಿಸಿದ ಶಿವಕುಮಾರ್, “ಅವರು ಕೇವಲ ಬೊಗಳೆ ದಾಸರು. ಖಾಲಿ ಮಾತು ಮತ್ತು ಟೀಕೆಗೆ ಮಾತ್ರ ಸೀಮಿತರಾಗಿದ್ದಾರೆ. ಬಡವರು ಮತ್ತು ಕಾರ್ಮಿಕರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಈ ಬೆಲೆ ಏರಿಕೆ ವಿರುದ್ಧ ಅವರೂ ಹೋರಾಟ ಮಾಡಲಿ” ಎಂದು ಸವಾಲು ಹಾಕಿದರು.
ಕೇಂದ್ರದ ವಿದೇಶಾಂಗ ನೀತಿ ವಿಫಲ
ವಿದೇಶಾಂಗ ನೀತಿಯ ಬಗ್ಗೆಯೂ ಟೀಕೆ ಮಾಡಿದ ಅವರು, “ಯುದ್ಧದ ಸಮಯದಲ್ಲಿ ಮಿತ್ರ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಬೇಕಿತ್ತು. ಆದರೆ ಕೇಂದ್ರದ ವಿದೇಶಾಂಗ ನೀತಿ ವಿಫಲವಾಗಿದೆ. ನೆರೆ ರಾಷ್ಟ್ರಗಳೊಂದಿಗೆ ವೈರತ್ವ ಬೆಳೆದಿದೆ” ಎಂದರು.
ಹೈಕಮಾಂಡ್ ತೀರ್ಮಾನ ಪ್ರಸಾದವೆಂದು ಸ್ವೀಕಾರ
ಪಕ್ಷದ ಹೈಕಮಾಂಡ್ ತೀರ್ಮಾನಗಳ ಬಗ್ಗೆ ಪ್ರಶ್ನಿಸಿದಾಗ, “ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್ ತೆಗೆದ ಯಾವುದೇ ತೀರ್ಮಾನವನ್ನು ಪ್ರಸಾದವೆಂದು ಸ್ವೀಕರಿಸುತ್ತೇವೆ” ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 600 ಕೋಟಿ ಅನುದಾನ ಬಿಡುಗಡೆ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, “ನಿನ್ನೆ 18 ಸಾವಿರ ಕೋಟಿ ವೆಚ್ಚದಲ್ಲಿ ಬಿಡದಿ ಬಳಿ ಸ್ಯಾಟಲೈಟ್ ಟೌನ್‌ಶಿಪ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಅದನ್ನು ಬಿಟ್ಟು ಅಲ್ಪಸಂಖ್ಯಾತರಿಗೆ ನೀಡಿದ ಅನುದಾನವನ್ನು ಮಾತ್ರ ದೊಡ್ಡದಾಗಿ ಬಿಂಬಿಸುತ್ತಿದ್ದೀರಿ” ಎಂದು ಹೇಳಿದರು.












