ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದರು
ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್-1ರಲ್ಲಿ ದೀರ್ಘಕಾಲದಿಂದ ಇದ್ದ ಪಾರ್ಕಿಂಗ್ ಸಮಸ್ಯೆಗೆ ಸುಸ್ಥಿರ ಪರಿಹಾರ ದೊರೆತಿದೆ. ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಅವರು ಇಂದು ಪುನರ್ ಅಭಿವೃದ್ಧಿಪಡಿಸಲಾದ ಪಾರ್ಕಿಂಗ್ ಪ್ರದೇಶಕ್ಕೆ ಚಾಲನೆ ನೀಡಿದರು.
ರೂ. 3.29 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ಪಾರ್ಕಿಂಗ್ ಆವರಣವು ವಾಹನಗಳ ಸುಗಮ ಸಂಚಾರಕ್ಕೆ ಮತ್ತು ಪ್ರಯಾಣಿಕರ ಹಾಗೂ ಸಿಬ್ಬಂದಿಗಳ ಅನುಕೂಲಕ್ಕೆ ನೆರವಾಗಲಿದೆ. ಟರ್ಮಿನಲ್-1 ಬಳಿಯ ವಿಶ್ರಾಂತಿ ಗೃಹಕ್ಕೆ ಹೊಂದಿಕೊಂಡಿದ್ದ ಸ್ಥಳವು ಗುಂಡಿಗಳಿಂದ ತುಂಬಿ, ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವುದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಗಳಿಗೆ ತುಂಬಾ ತೊಂದರೆಯಾಗುತ್ತಿತ್ತು.

ಈ ಸಮಸ್ಯೆಯ ಬಗ್ಗೆ ಸಚಿವರ ಗಮನಕ್ಕೆ ಬಂದ ಕೂಡಲೇ ಅವರು ಸ್ಥಳಕ್ಕೆ ಭೇಟಿ ನೀಡಿ, ತುರ್ತಾಗಿ ಪಾರ್ಕಿಂಗ್ ಆವರಣವನ್ನು ಅಭಿವೃದ್ಧಿಪಡಿಸುವಂತೆ ಆದೇಶ ನೀಡಿದ್ದರು. ಆದೇಶದಂತೆ ಎರಡುವರೆ ಎಕರೆ ಪ್ರದೇಶವನ್ನು ವಾಹನ ನಿಲುಗಡೆಗೆ ಸೂಕ್ತವಾಗಿ ಅಭಿವೃದ್ಧಿಪಡಿಸಲು ಟೆಂಡರ್ ಕರೆದು ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಈ ಹೊಸ ಪಾರ್ಕಿಂಗ್ ಸ್ಥಳದಲ್ಲಿ ಸುಮಾರು 100 ಬಸ್‌ಗಳನ್ನು ನಿಲುಗಡೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಆವರಣದಲ್ಲಿ 11 ವಿದ್ಯುತ್ ದೀಪದ ಕಂಬಗಳನ್ನು ಸ್ಥಾಪಿಸಲಾಗಿದ್ದು, ವಿದ್ಯುತ್ ಪ್ಯಾನಲ್ ಕೊಠಡಿಯನ್ನೂ ನಿರ್ಮಿಸಲಾಗಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಈ ಸ್ಥಳದಲ್ಲಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಕ್ರಂ ಪಾಷ ಭಾಆಸೇ ಅವರು, ನಿಗಮದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಅಭಿವೃದ್ಧಿ ಕೆಲಸದಿಂದ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸಮಸ್ಯೆ ತಾತ್ಕಾಲಿಕವಾಗಿ ಪರಿಹಾರವಾಗುವುದರ ಜೊತೆಗೆ, ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












