ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ನೌಕರರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆಗಳ ನಿರ್ವಹಣೆಯಲ್ಲಿ ವಿಫಲವಾಗಿ ಸಾರಿಗೆ ನಿಗಮಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಆರೋಪಿಸಿದ್ದಾರೆ.
ಕೆಎಸ್‌ಆರ್‌ಟಿಸಿ ನೌಕರರು ಸಂಕಷ್ಟದ ನಡುವೆಯೂ ತಮ್ಮ ಸೇವಾ ನಿಷ್ಠೆಯನ್ನು ಸಂಯಮದಿಂದ ಮುಂದುವರೆಸಿಕೊಂಡು ಬಂದಿದ್ದಾರೆ. ಆದರೆ, ಅವರ ನ್ಯಾಯಯುತ ಬೇಡಿಕೆಗಳಾದ ವೇತನ ಪರಿಷ್ಕರಣೆ ಮತ್ತು 38 ತಿಂಗಳ ಬಾಕಿ ವೇತನ ಬಿಡುಗಡೆಯನ್ನು ಸರ್ಕಾರ ಈಡೇರಿಸಿಲ್ಲ. ಇದರಿಂದ ಸಂಬಳವನ್ನೇ ಆಧರಿಸಿ ಕುಟುಂಬ ನಿರ್ವಹಣೆ ಮಾಡುವ ಸಿಬ್ಬಂದಿಗಳ ಸ್ಥಿತಿ ಶೋಚನೀಯವಾಗಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
“ನೌಕರರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡದೆ, ಅವರ ಹಿತಾಸಕ್ತಿಯನ್ನು ರಾಜ್ಯ ಸರ್ಕಾರ ತಾತ್ಸಾರದಿಂದ ನೋಡುತ್ತಿದೆ. ಸಾರಿಗೆ ನೌಕರರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಸರ್ಕಾರ ತುರ್ತು ಕ್ರಮ ಕೈಗೊಳ್ಳದಿದ್ದರೆ, ಆಗಸ್ಟ್ 5 ರಿಂದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಲಿದ್ದಾರೆ. ಇದರಿಂದ ಉಂಟಾಗುವ ಸಾರ್ವಜನಿಕ ಅನಾನುಕೂಲತೆ ಮತ್ತು ತೊಂದರೆಗಳಿಗೆ ಸರ್ಕಾರವೇ ಜವಾಬ್ದಾರವಾಗಿರುತ್ತದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ನೌಕರರ ನ್ಯಾಯಯುತ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ವ್ಯಕ್ತಪಡಿಸಿದೆ. “ಸಾರಿಗೆ ನಿಗಮದ ಸಿಬ್ಬಂದಿಗಳ ಹಕ್ಕೊತ್ತಾಯಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ” ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.












