ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದ ಡಾ. ಎಂ.ಎ. ಸಲೀಂ ಅವರು ಇಂದು ಬುಧವಾರ ತಮ್ಮ ಕಚೇರಿಯಲ್ಲಿ ಮೊಬೈಲ್ ಮೂಲಕ ಜನಗಣತಿ 2027ರ ಸ್ವಯಂ ಗಣತಿ (ಸೆಲ್ಫ್ ಎನ್ಯುಮರೇಷನ್) ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.
ಕೇಂದ್ರ ಸರ್ಕಾರದ ಜನಗಣತಿ 2027ರ ಮೊದಲ ಹಂತವಾದ ಹೌಸ್ ಲಿಸ್ಟಿಂಗ್ ಮತ್ತು ಹೌಸಿಂಗ್ ಸೆನ್ಸಸ್ಗೆ ಪೂರಕವಾಗಿ ಪರಿಚಯಿಸಲಾಗಿರುವ ಸ್ವಯಂ ಗಣತಿ ವ್ಯವಸ್ಥೆಯಲ್ಲಿ ಡಿಜಿಪಿ ಸಲೀಂ ಅವರು ಮೊದಲಿಗರಲ್ಲಿ ಒಬ್ಬರಾಗಿ ತಮ್ಮ ಮಾಹಿತಿಯನ್ನು ಆನ್ಲೈನ್ನಲ್ಲಿ ದಾಖಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಜನಗಣತಿ ನಿರ್ದೇಶಕ ರಾಮಚಂದ್ರನ್ ಅವರು ಉಪಸ್ಥಿತರಿದ್ದರು.
ಏಪ್ರಿಲ್ 1ರಿಂದ 15ರವರೆಗೆ ಎಲ್ಲಾ ನಾಗರಿಕರು ಅಧಿಕೃತ ಪೋರ್ಟಲ್ se.census.gov.in ಮೂಲಕ ತಮ್ಮ ಕುಟುಂಬದ ವಿವರಗಳನ್ನು ಸ್ವಯಂ ದಾಖಲಿಸಿಕೊಳ್ಳಬಹುದು ಎಂದು ಜನಗಣತಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕ್ರಿಯೆ ಸರಳ ಮತ್ತು ಸುರಕ್ಷಿತವಾಗಿದ್ದು, ನಾಗರಿಕರು ಯಾವುದೇ ಆತಂಕವಿಲ್ಲದೆ ತಮ್ಮ ಮಾಹಿತಿಯನ್ನು ನಮೂದಿಸಬಹುದು.
“ನಮ್ಮ ಜನಗಣತಿ – ನಮ್ಮ ಅಭಿವೃದ್ಧಿ” ಎಂಬ ಧ್ಯೇಯವಾಕ್ಯದೊಂದಿಗೆ ಕೇಂದ್ರ ಸರ್ಕಾರವು ಜನಗಣತಿ 2027ರನ್ನು ಹಮ್ಮಿಕೊಂಡಿದೆ. ಸ್ವಯಂ ಗಣತಿ ಮೂಲಕ ಪಡೆದ ಮಾಹಿತಿಯನ್ನು ನಂತರ ಎನ್ಯುಮರೇಟರ್ಗಳು ಮನೆಗೆ ಭೇಟಿ ನೀಡಿ ಪರಿಶೀಲಿಸುವರು. ಕರ್ನಾಟಕದಲ್ಲಿ ಏಪ್ರಿಲ್ 16ರಿಂದ ಮೇ 15ರವರೆಗೆ ಮನೆಮನೆಗೆ ಗಣತಿ ಪ್ರಕ್ರಿಯೆ ನಡೆಯಲಿದೆ.
ಈ ಡಿಜಿಟಲ್ ಸೌಲಭ್ಯವು ಜನಗಣತಿಯನ್ನು ಹೆಚ್ಚು ನಿಖರ ಮತ್ತು ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಾಗರಿಕರು ತಮ್ಮ ಮೊಬೈಲ್ ಸಂಖ್ಯೆ ಬಳಸಿ ಪೋರ್ಟಲ್ನಲ್ಲಿ ರಿಜಿಸ್ಟರ್ ಮಾಡಿ, OTP ಮೂಲಕ ದೃಢೀಕರಣ ಮಾಡಿ ವಿವರಗಳನ್ನು ಭರ್ತಿ ಮಾಡಬಹುದು. ಪ್ರಕ್ರಿಯೆ ಪೂರ್ಣಗೊಂಡ ನಂತರ ಸ್ವಯಂ ಗಣತಿ ಐಡಿ (SE ID) ದೊರೆಯುತ್ತದೆ.












