‘ನನ್ನ ಖಾತೆ, ನನ್ನ ಹಕ್ಕು’ ಅಭಿಯಾನಕ್ಕೆ ಮೇ 16ರಂದು ಚಾಲನೆ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ‘ಭೂ ಗ್ಯಾರಂಟಿ’ ಅಡಿಯಲ್ಲಿ ಬೆಂಗಳೂರು ನಾಗರಿಕರಿಗೆ ಮಹತ್ವದ ಸೌಲಭ್ಯಗಳನ್ನು ಘೋಷಿಸಿದ್ದಾರೆ ಉಪ ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕೇಂದ್ರ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಅವರು ಹಲವು ನಾಗರಿಕ ಸ್ನೇಹಿ ಘೋಷಣೆಗಳನ್ನು ಮಾಡಿದರು.
ಮುಖ್ಯ ಘೋಷಣೆಗಳು:
- ‘ನನ್ನ ಖಾತೆ, ನನ್ನ ಹಕ್ಕು’ ಅಭಿಯಾನ: ಮೇ 16ರಿಂದ ಪ್ರಾರಂಭ. ಮೂರು ತಿಂಗಳ ಕಾಲ ಪ್ರತಿ ಶನಿವಾರ 5 ಪಾಲಿಕೆಗಳ 50 ಸ್ಥಳಗಳಲ್ಲಿ ‘ಇ-ಖಾತಾ’ ವಿತರಣೆಗೆ ಚಾಲನೆ. ಬೆಳಿಗ್ಗೆ 10 ರಿಂದ ಸಂಜೆವರೆಗೆ ಕಾರ್ಯಕ್ರಮ.
- ‘ಇ’ ಖಾತಾ ವಿತರಣೆ: ಭಾರತದ ಅತಿದೊಡ್ಡ ಡಿಜಿಟಲ್ ಆಸ್ತಿ ದಾಖಲೆ ವ್ಯವಸ್ಥೆ. 23 ಲಕ್ಷಕ್ಕೂ ಹೆಚ್ಚು ಆಸ್ತಿ ದಾಖಲೆಗಳು ಈಗಾಗಲೇ ನಾಗರಿಕರ ಕೈ ಸೇರಿವೆ. https://BBMPeAasthi.karnataka.gov.in ವೆಬ್‌ಸೈಟ್‌ನಲ್ಲಿ ಹಳೆಯ ಖಾತೆಗಳನ್ನು ಪಡೆಯಬಹುದು.
- ‘ಎ’ ಖಾತೆಗೆ ಬದಲಾವಣೆಗೆ ಬಂಪರ್ ರಿಯಾಯಿತಿ: ‘ಬಿ’ ಖಾತೆಯಿಂದ ‘ಎ’ ಖಾತೆಗೆ ಅರ್ಜಿ ಸಲ್ಲಿಸಿದವರು 100 ದಿನಗಳೊಳಗೆ ಶುಲ್ಕ ಪಾವತಿಸಿದರೆ ಗೈಡೆನ್ಸ್ ವ್ಯಾಲ್ಯೂನ ಶೇ.5ರ ಬದಲು ಶೇ.2ರಷ್ಟು ಮಾತ್ರ ಕಟ್ಟಬೇಕು (ಶೇ.60 ರಿಯಾಯಿತಿ). 7 ಲಕ್ಷ ಆಸ್ತಿ ಮಾಲೀಕರಿಗೆ ಲಾಭ.
- ಕಟ್ಟಡ ಉಲ್ಲಂಘನೆ ವಿನಾಯಿತಿ: ಎತ್ತರ, ಎಫ್‌ಎಆರ್, ಸೆಟ್‌ಬ್ಯಾಕ್‌ನಲ್ಲಿ ಶೇ.5ರಿಂದ ಶೇ.15ಕ್ಕೆ ಹೆಚ್ಚಳ. ಶೇ.15ರವರೆಗೆ ದಂಡ ಪಾವತಿಸಿ ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯಬಹುದು.
- ಓಟಿಎಸ್ (ಒಂದು ಬಾರಿ ಸೆಟ್ಟಲ್‌ಮೆಂಟ್): ಬಿಡಿಎ ಅನುಮತಿ ಇಲ್ಲದ ಬಡಾವಣೆಗಳಲ್ಲಿ ಮನೆ ನಿರ್ಮಿಸಿದವರಿಗೆ ಮೂರು ತಿಂಗಳ ಅವಕಾಶ. ಮೊದಲ 100 ದಿನ ಅರ್ಜಿ, ನಂತರ ಪರಿಶೀಲನೆ ಮತ್ತು ಪಾವತಿ. ಶೇ.50ರಷ್ಟು ರಿಯಾಯಿತಿ.
- ಶಿವರಾಂ ಕಾರಂತ ಬಡಾವಣೆ: 3,052 ಭೂ ಮಾಲೀಕರಿಗೆ 18,000 ನಿವೇಶನಗಳ ಹಂಚಿಕೆ. ಮೇ 15ರಿಂದ ಪ್ರಕ್ರಿಯೆ ಪ್ರಾರಂಭ.
- ಗ್ರೀನ್ ಬೆಂಗಳೂರು: ಬಿಡಿಎ 50 ವರ್ಷ ಪೂರೈಸುವ ಸಂದರ್ಭದಲ್ಲಿ ಜೂನ್ 27ರಂದು 15 ಲಕ್ಷ ಸಸಿ ನೆಡುವ ಕಾರ್ಯಕ್ರಮ.
- ಬಿಡಿಎ ಮನೆಗಳ ಹಂಚಿಕೆ: ವೈಟ್‌ಫೀಲ್ಡ್‌ನಲ್ಲಿ 1,900 ಮನೆಗಳು. 760 ಚದರ ಅಡಿ 1 ಬಿಹೆಚ್‌ಕೆ ಮನೆ 6,686 ರೂ.ಗೆ, 1,733 ಚದರ ಅಡಿ 3 ಬಿಹೆಚ್‌ಕೆ ಮನೆ 1.44 ಕೋಟಿ ರೂ.ಗೆ. ಮೇ 15ರಿಂದ ಅರ್ಜಿ.
ಇದರ ಜೊತೆಗೆ ಬಿಜಿನೆಸ್ ಕಾರಿಡಾರ್, ಹೆಬ್ಬಾಳ ಟನಲ್, ಎಲಿವೇಟೆಡ್ ಕಾರಿಡಾರ್, ನಾಡಪ್ರಭು ಕೆಂಪೇಗೌಡ ಬಡಾವಣೆ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.
“ಈ ಎಲ್ಲಾ ಯೋಜನೆಗಳು ಪಾರದರ್ಶಕವಾಗಿ, ಲಂಚವಿಲ್ಲದೆ ಜನರಿಗೆ ತಲುಪುತ್ತವೆ” ಎಂದು ಅವರು ಹೇಳಿದರು.












