ಬೆಂಗಳೂರು: ದಾವಣಗೆರೆ ಉಪಚುನಾವಣೆ ನಂತರ ಅಲ್ಪಸಂಖ್ಯಾತರ ಆಕ್ರೋಶಕ್ಕೆ ಬೆದರಿ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಮತಬ್ಯಾಂಕ್ ಉಳಿಸಿಕೊಳ್ಳಲು ‘ಹಿಜಾಬ್’ ಅಸ್ತ್ರವನ್ನು ಬಳಸುತ್ತಿದೆ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ರಾಜ್ಯದ ನೈಜ ಸಮಸ್ಯೆಗಳಾದ ಬೆಲೆ ಏರಿಕೆ, ಭ್ರಷ್ಟಾಚಾರ, ರೈತರ ಸಂಕಷ್ಟ ಮತ್ತು ಕಾನೂನು ಸುವ್ಯವಸ್ಥೆಯ ವೈಫಲ್ಯದ ಬಗ್ಗೆ ಮೌನವಾಗಿರುವ ಸರ್ಕಾರ, ಮುಸ್ಲಿಂ ಮತಬ್ಯಾಂಕ್ಗೆ ಮುಲಾಮು ಹಚ್ಚಲು ಹಿಜಾಬ್ ನೀತಿಯನ್ನು ಬಳಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
2022ರಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಶಾಲಾ-ಕಾಲೇಜುಗಳ ವಸ್ತ್ರಸಂಹಿತೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಮುಖ್ಯ ಎಂದು ತೀರ್ಪು ನೀಡಿದ್ದ ಕೋರ್ಟ್ ಆದೇಶವನ್ನು ಪ್ರಸ್ತುತ ಸರ್ಕಾರ ಗಾಳಿಗೆ ತೂರಿ ಒಂದು ಸಮುದಾಯದ ಓಲೈಕೆಗೆ ಮುಂದಾಗಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ.
“ಒಂದು ಸಮುದಾಯದ ಹಿಜಾಬ್ಗೆ ಹಸಿರು ನಿಶಾನೆ ತೋರಿಸುತ್ತಿರುವ ಸಿದ್ದರಾಮಯ್ಯ ಸರ್ಕಾರ, ಕೇಸರಿ ಶಾಲುವಿಗೆ ಮಾತ್ರ ನಿಷೇಧ ಹೇರಿದೆ. ಈ ಓಲೈಕೆ ರಾಜಕಾರಣ ಹಿಂದೂಗಳಿಗೆ ಅರ್ಥವಾಗುವುದಿಲ್ಲ” ಎಂದು ಅವರು ಪ್ರಶ್ನಿಸಿದ್ದಾರೆ.
ಶಾಲಾ-ಕಾಲೇಜುಗಳನ್ನು ಸಮಾನತೆಯ ಕೇಂದ್ರಗಳನ್ನಾಗಿ ನೋಡುವ ಬದಲು ಧರ್ಮದ ಆಧಾರದಲ್ಲಿ ವಿದ್ಯಾರ್ಥಿಗಳನ್ನು ವಿಭಜಿಸುತ್ತಿರುವುದು ನಾಚಿಕೆಗೇಡು ಎಂದು ಆರ್. ಅಶೋಕ್ ಟೀಕಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಅತಿಯಾದ ಓಲೈಕೆ ರಾಜಕಾರಣದಿಂದ ಯಾವ ಸ್ಥಿತಿಗೆ ತಲುಪಿದೆಯೋ ಅದೇ ಗತಿ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೂ ಕಾದಿದೆ ಎಂದು ಎಚ್ಚರಿಸಿದ ಅವರು, ತುಷ್ಟೀಕರಣದ ಪರಾಕಾಷ್ಠೆ ತಲುಪಿರುವ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸುವುದು ಗ್ಯಾರಂಟಿ ಎಂದು ಹೇಳಿದ್ದಾರೆ.
ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಂವಿಧಾನ ಮತ್ತು ನ್ಯಾಯಾಂಗದ ಆಶಯಗಳನ್ನು ಬಲಿಕೊಡುತ್ತಿರುವ ಈ ಸರ್ಕಾರಕ್ಕೆ ಜನರು ಅಂತ್ಯ ಹಾಡುವರು ಎಂದು ಆರ್. ಅಶೋಕ್ ಹೇಳಿದ್ದಾರೆ.












