ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರಯಾಣಕ್ಕೆ ತೆರಿಗೆ, ಸೆಸ್ ಅಥವಾ ಸರ್ಚಾರ್ಜ್ ವಿಧಿಸುವ ಬಗ್ಗೆ ಸುದ್ದಿಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.
ಟ್ವಿಟ್ಟರ್‌ನಲ್ಲಿ (ಎಕ್ಸ್) ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಇದು ಸಂಪೂರ್ಣವಾಗಿ ಸುಳ್ಳು. ಇದರಲ್ಲಿ ಒಂದು ಅಕ್ಷರವೂ ಸತ್ಯವಿಲ್ಲ. ವಿದೇಶ ಪ್ರಯಾಣಕ್ಕೆ ಅಂತಹ ಯಾವುದೇ ನಿರ್ಬಂಧಗಳನ್ನು ಹೇರಲು ಯಾವುದೇ ಪ್ರಶ್ನೆಯೇ ಇಲ್ಲ. ನಮ್ಮ ಜನರಿಗೆ ‘ಈಸ್ ಆಫ್ ಡೂಯಿಂಗ್ ಬಿಸಿನೆಸ್’ ಮತ್ತು ‘ಈಸ್ ಆಫ್ ಲಿವಿಂಗ್’ ಸುಧಾರಿಸುವಲ್ಲಿ ನಾವು ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ.
ಈ ಹಿಂದೆ ಸಿಎನ್‌ಬಿಸಿ-ಟಿವಿ18 ವರದಿಯಲ್ಲಿ, “ವಿದೇಶ ಪ್ರಯಾಣಕ್ಕೆ ತೆರಿಗೆ/ಸೆಸ್/ಸರ್ಚಾರ್ಜ್ ವಿಧಿಸುವ ಪ್ರಸ್ತಾಪವನ್ನು ಸರ್ಕಾರ ಉನ್ನತ ಮಟ್ಟದಲ್ಲಿ ಚರ್ಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ” ಎಂದು ವರದಿ ಮಾಡಲಾಗಿತ್ತು.
ಪ್ರಧಾನಿ ಮೋದಿ ಅವರ ಸ್ಪಷ್ಟೀಕರಣದಿಂದ ಈ ವಿಷಯಕ್ಕೆ ಪೂರ್ಣವಿರಾಮ ಬಿದ್ದಂತಾಗಿದೆ. ಸರ್ಕಾರ ವಿದೇಶ ಪ್ರಯಾಣಕ್ಕೆ ಯಾವುದೇ ಹೊಸ ತೆರಿಗೆ ವಿಧಿಸುವ ಯೋಜನೆ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.












