ಹುಬ್ಬಳ್ಳಿ: ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ. 33ರಷ್ಟು ಮೀಸಲಾತಿ ನೀಡುವ ನಾರಿ ಶಕ್ತಿ ವಂದನ ಅಧಿನಿಯಮವನ್ನು ಜಾರಿಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೃಢನಿರ್ಧಾರ ತೋರಿದ್ದರು. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಲೋಕಸಭೆಯಲ್ಲಿ ಮಸೂದೆ ಅನುಮೋದನೆಯಾಗದಂತೆ ಷಡ್ಯಂತ್ರ ರಚಿಸಿ ಅದನ್ನು ತಡೆದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಈ ದೇಶದ ಮಹಿಳೆಯರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಗೌರವವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ” ಎಂದು ತೀವ್ರ ಆಕ್ಷೇಪಿಸಿದರು.
ಪ್ರಧಾನಮಂತ್ರಿ ಮೋದಿ ಅವರು ನಾರಿ ಶಕ್ತಿಗೆ ಹೆಚ್ಚಿನ ಗೌರವ ನೀಡುವ ಉದ್ದೇಶದಿಂದ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಿ ಅವರನ್ನು ಸಮಾಜದ ಮುಂಚೂಣಿಗೆ ತರಲು ಬಯಸಿದ್ದರು. ಆದರೆ ಇದನ್ನು ಸಹಿಸಲಾರದ ಕಾಂಗ್ರೆಸ್ ಪಕ್ಷವು ಷಡ್ಯಂತ್ರ ಮಾಡಿದೆ ಎಂದು ವಿಜಯೇಂದ್ರ ಹೇಳಿದರು.
“ಕಾಂಗ್ರೆಸ್‌ನ ಈ ಉದ್ಧಟತನವನ್ನು ಧಿಕ್ಕರಿಸಿ, ಆ ಪಕ್ಷದ ನಿಜ ಸ್ವರೂಪವನ್ನು ಬಯಲು ಮಾಡುವ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಮಹಿಳೆಯರ ನೇತೃತ್ವದಲ್ಲಿ ಬೃಹತ್ ಹೋರಾಟವನ್ನು ಬಿಜೆಪಿ ಹಮ್ಮಿಕೊಂಡಿದೆ” ಎಂದು ಅವರು ತಿಳಿಸಿದರು.
ಮುಂದಿನ ಹೋರಾಟದ ಕುರಿತು ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಅವರು ಹೇಳಿದರು. ಇವರು ಏನೇ ಷಡ್ಯಂತ್ರ ಮಾಡಿದರೂ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅತಿ ಶೀಘ್ರದಲ್ಲೇ ಮಸೂದೆಯನ್ನು ಮತ್ತೊಮ್ಮೆ ಅನುಮೋದಿಸುವ ನಿಟ್ಟಿನಲ್ಲಿ ಯಶಸ್ವಿಯಾಗುತ್ತಾರೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, “ಜಗತ್ತಿನ ಪರಿಸ್ಥಿತಿ ಎಲ್ಲರಿಗೂ ತಿಳಿದಿದೆ. ಅಮೆರಿಕ-ಇರಾನ್ ನಡುವಿನ ಯುದ್ಧದಿಂದಾಗಿ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್‌ನವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಯಾವುದೇ ಅನುಕೂಲವಾಗುವುದಿಲ್ಲ” ಎಂದು ಟೀಕಿಸಿದರು












