ಬೆಂಗಳೂರು: ಗೆದ್ದವರನ್ನು ಸಂವಿಧಾನದ ಪ್ರಕಾರ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಅದನ್ನು ಉಲ್ಲಂಘಿಸುವುದು ಅಕ್ಷಮ್ಯ ಅಪರಾಧ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಅರಗ ಜ್ಞಾನೇಂದ್ರ ಹಾಗೂ ಮರು ಮತ ಎಣಿಕೆಯ ನಂತರ ಶೃಂಗೇರಿಯಿಂದ ಶಾಸಕರಾಗಿ ಆಯ್ಕೆಯಾದ ಡಿ.ಎನ್. ಜೀವರಾಜ್ ಅವರೊಂದಿಗೆ ಭೇಟಿ ನೀಡಿದ್ದಾಗಿ ತಿಳಿಸಿದರು. ಈ ಕುರಿತು ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ಶೀಘ್ರದಲ್ಲೇ ಪತ್ರ ಬರೆಯುವ ಸಾಧ್ಯತೆ ಇದೆ ಎಂದರು.
ಶಾಸಕರಿಗೆ ಪ್ರಮಾಣವಚನವನ್ನು ಸಂವಿಧಾನಾತ್ಮಕವಾಗಿ ಸ್ಪೀಕರ್ ಬೋಧಿಸಬೇಕು. ಅದು ಸಾಧ್ಯವಾಗದಿದ್ದರೆ ರಾಜ್ಯಪಾಲರು ಬೋಧಿಸಬೇಕು ಎಂದು ಆಗ್ರಹಿಸಿದ ಅವರು, ಇಲ್ಲವಾದರೆ ಸ್ಪೀಕರ್ ಹುದ್ದೆಯ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ತಮಿಳುನಾಡಿನ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅಶೋಕ್, ಚಿತ್ರನಟ ವಿಜಯ್ ಹೆಚ್ಚು ಸ್ಥಾನ ಗಳಿಸಿದ್ದರೂ ಬಹುಮತ ಸಿಗದಿರುವುದನ್ನು ಉದಾಹರಿಸಿದರು. ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ ಅವರು, “ಯಾವಲ್ಲಿ ಲಾಭವೋ ಅಲ್ಲಿಗೆ ಹೋಗುವುದು ಕಾಂಗ್ರೆಸ್ ಧೋರಣೆ” ಎಂದು ಟೀಕಿಸಿದರು.
ಡಿಎಂಕೆ ಜೊತೆಗಿನ ಕಾಂಗ್ರೆಸ್ ನಿಲುವು ಕುರಿತು ಪ್ರಶ್ನಿಸಿದ ಅವರು, ಈಗ ವಿಜಯ್ ಅವರಿಗೆ ಬೆಂಬಲ ನೀಡಲು ಕಾಂಗ್ರೆಸ್ ಘಟಕ ತೀರ್ಮಾನಿಸಿರುವುದು ಅವರ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು ಹೇಳಿದರು. “ಕಾಂಗ್ರೆಸ್ಗೆ ಸ್ಪಷ್ಟ ಸಿದ್ಧಾಂತ, ನೀತಿ ಇಲ್ಲ. ಗೆದ್ದವರ ಕಡೆ ತಿರುಗುವುದು ಅವರ ರಾಜಕೀಯ ಧರ್ಮವಾಗಿದೆ” ಎಂದು ಆರೋಪಿಸಿದರು.
ಇಂಡಿ ಒಕ್ಕೂಟದ ಮೇಲೂ ಟೀಕೆ ನಡೆಸಿದ ಅವರು, ಜನರು ಇಂತಹ ರಾಜಕೀಯ ನಡೆಗಳನ್ನು ಗಮನಿಸುತ್ತಿದ್ದಾರೆ ಎಂದು ಹೇಳಿದರು. ಹಿಂದುತ್ವ ವಿಚಾರದಲ್ಲೂ ಡಿಎಂಕೆ ನಾಯಕರ ನಿಲುವು ತಮಿಳುನಾಡಿನ ಜನರು ತಿರಸ್ಕರಿಸಿದ್ದಾರೆ ಎಂದು ಅಶೋಕ್ ಹೇಳಿದರು.












