ಹುಬ್ಬಳ್ಳಿ: ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುವುದಿಲ್ಲ; ಬದಲಾಗಿ ಈ ರಾಜ್ಯಗಳಿಗೆ ಶೇ.50 ರಷ್ಟು ಹೆಚ್ಚುವರಿ ಸ್ಥಾನಗಳು ಲಭಿಸಲಿವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ ‘ಬೃಹತ್ ಜನಾಕ್ರೋಶ ಮಹಿಳಾ ಪ್ರತಿಭಟನಾ ಸಭೆ’ಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ಇಂಡಿ ಒಕ್ಕೂಟದ ಪಕ್ಷಗಳು ತಪ್ಪು ಮಾಹಿತಿ ಹರಡುತ್ತಿವೆ ಎಂದು ಆರೋಪಿಸಿದರು.
ಇಂಡಿ ಒಕ್ಕೂಟದ ಭಾಗವಾಗಿರುವ ವಿವಿಧ ಪ್ರಾದೇಶಿಕ ಪಕ್ಷಗಳು ದೇಶವನ್ನು ವಿಭಜಿಸುವ ಮನೋಭಾವ ಹೊಂದಿವೆ ಎಂದು ಟೀಕಿಸಿದ ಅವರು, ಜನರು ಈ ರೀತಿಯ ಷಡ್ಯಂತ್ರಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ನಿರ್ಣಾಯಕ ಪ್ರಗತಿಯ ದಾರಿಗೆ ಸಾಗುತ್ತಿದೆ ಎಂದು ತಿಳಿಸಿದ ಅವರು, ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು ಎಂದು ಸ್ಮರಿಸಿದರು.
ಬಿಜೆಪಿ ಪಕ್ಷವು ಸದಾ ಮಹಿಳೆಯರಿಗೆ ಆದ್ಯತೆ ನೀಡುತ್ತಾ ಬಂದಿದೆ ಎಂದು ಅವರು ಹೇಳಿದರು.











