ಬೆಂಗಳೂರು: ನಗರದ ಸಂಚಾರ ವ್ಯವಸ್ಥೆ ಸುಧಾರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಡಬಲ್ ಡೆಕ್ಕರ್ ಮಾರ್ಗಗಳು, ಪಾರ್ಕಿಂಗ್ ಕಟ್ಟಡಗಳು, ಮೇಲ್ಸೆತುವೆಗಳು ಮತ್ತು ಅಂಡರ್ ಪಾಸ್‌ಗಳು ಮಹತ್ವದ ಪಾತ್ರ ವಹಿಸಲಿವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಶುಕ್ರವಾರ ಎಂ.ಜಿ. ರಸ್ತೆ ಮೆಟ್ರೋ ಕಂಬಗಳಿಗೆ ಡೈನಾಮಿಕ್ ಲೈಟಿಂಗ್ ವ್ಯವಸ್ಥೆ, ಕೆ.ಆರ್. ಮಾರುಕಟ್ಟೆಯ ನೆಲಮಹಡಿ ಪಾರ್ಕಿಂಗ್ ಸಂಕೀರ್ಣದ ಕಾರ್ಯಾಚರಣೆ ಹಾಗೂ ಬನಶಂಕರಿ ಬಸ್ ನಿಲ್ದಾಣದ ಜಂಕ್ಷನ್‌ನಲ್ಲಿ ಸ್ಕೈವಾಕ್ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಈ ಯೋಜನೆಗಳು ‘ಬ್ರ್ಯಾಂಡ್ ಬೆಂಗಳೂರು’ ನಿರ್ಮಾಣಕ್ಕೆ ನೆರವಾಗಲಿವೆ” ಎಂದರು.

ಕೆ.ಆರ್. ಮಾರುಕಟ್ಟೆಯಲ್ಲಿ ನೂತನ ಪಾರ್ಕಿಂಗ್ ಕಟ್ಟಡವನ್ನು ಸಾರ್ವಜನಿಕ ಬಳಕೆಗೆ ತೆರೆದಿದ್ದು, ಇದರ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗಿದೆ. ವಾಹನ ನಿಲುಗಡೆಗೆ ಅತಿಯಾದ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಸುತ್ತಮುತ್ತ 1 ಕಿ.ಮೀ ವ್ಯಾಪ್ತಿಯಲ್ಲಿ ಅನಧಿಕೃತ ಪಾರ್ಕಿಂಗ್‌ಗೆ ಅವಕಾಶ ಇರಬಾರದು. ನಿಯಮ ಉಲ್ಲಂಘಿಸಿದ ವಾಹನಗಳನ್ನು ಟೋ ಮಾಡಲಾಗುತ್ತದೆ” ಎಂದು ಎಚ್ಚರಿಸಿದರು.
ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕಾಗಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡಲಾಗುತ್ತಿದೆ. “ಸಣ್ಣ ಜಾಗದಲ್ಲೇ ಹೆಚ್ಚು ವಾಹನಗಳನ್ನು ನಿಲುಗಡೆ ಮಾಡುವ ತಂತ್ರಜ್ಞಾನಗಳನ್ನು ಬಳಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ” ಎಂದು ಹೇಳಿದರು.

ನಗರದಲ್ಲಿ ಸುಮಾರು 44 ಕಿಮೀ ಉದ್ದದ ಡಬಲ್ ಡೆಕ್ಕರ್ ಯೋಜನೆ ಜಾರಿಗೆ ತರಲು ಚಿಂತನೆ ನಡೆದಿದೆ. “ಹಿಂದೆ ಈ ಯೋಜನೆ ಕೈಗೆತ್ತಿಕೊಂಡಿದ್ದರೆ ಮೆಟ್ರೋ ಮಾರ್ಗದ ಪ್ರಮುಖ ಭಾಗಗಳನ್ನು ಡಬಲ್ ಡೆಕ್ಕರ್ ಆಗಿ ಅಭಿವೃದ್ಧಿಪಡಿಸಬಹುದಿತ್ತು. ಆದರೂ ಈಗಲೂ ಅವಕಾಶ ಇದೆ” ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ, 138 ಕಿಮೀ ಉದ್ದದ ಮೇಲ್ಸೆತುವೆ ಮತ್ತು ಅಂಡರ್ ಪಾಸ್ ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭೂಸ್ವಾಧೀನ ವೆಚ್ಚ ಹೆಚ್ಚಾಗಿರುವುದರಿಂದ ಪರ್ಯಾಯವಾಗಿ ಮೇಲ್ಸೆತುವೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಬನಶಂಕರಿ ಜಂಕ್ಷನ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಕೈವಾಕ್ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದ್ದು, ಭವಿಷ್ಯದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಇದನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳ ಅಧ್ಯಯನ ನಡೆಯಲಿದೆ ಎಂದು ಹೇಳಿದರು.

ನಗರದಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, ಸುಮಾರು ಅದೇ ಪ್ರಮಾಣದ ವಾಹನಗಳು ಸಂಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಮಗ್ರ ಯೋಜನೆಗಳ ಮೂಲಕ ಸಂಚಾರ ಸಮಸ್ಯೆ ನಿವಾರಣೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಶಿವಕುಮಾರ್ ಹೇಳಿದರು.
“ಅಭಿವೃದ್ಧಿ ಒಂದು ದಿನದಲ್ಲಿ ಸಾಧ್ಯವಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಂತ ಹಂತವಾಗಿ ಬೆಂಗಳೂರು ಅಭಿವೃದ್ಧಿಪಡಿಸಲಾಗುತ್ತಿದೆ” ಎಂದು ಅವರು ಹೇಳಿದರು.











