ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ತೀವ್ರವಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಮಾರ್ಚ್ 2026ರಿಂದ ಇಂದಿನವರೆಗೆ ಒಟ್ಟು ₹208.67 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಂಗಳವಾರ ಈ ಕುರಿತು ಮಾತನಾಡಿದ ಅವರು, ತುರ್ತು ಕಾಮಗಾರಿಗಳಿಗೆ ಇಂದು ಹೆಚ್ಚುವರಿಯಾಗಿ ₹72 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು. ಈ ಅನುದಾನವನ್ನು ಹೊಸ ಕಾಮಗಾರಿಗಳ ಜೊತೆಗೆ, ಟಾಸ್ಕ್ ಫೋರ್ಸ್ ಸಮಿತಿಯಿಂದ ಅನುಮೋದನೆ ಪಡೆದಿದ್ದ ಪೂರ್ಣಗೊಂಡ ಕಾಮಗಾರಿಗಳ ಬಾಕಿ ಪಾವತಿಗೂ ಬಳಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಬೇಸಿಗೆಯ ತೀವ್ರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆಬಾವಿಗಳ ಇಳುವರಿ ಕಡಿಮೆಯಾಗಿದೆ. ಈ ಹಿನ್ನೆಲೆ ಜಿಲ್ಲಾಡಳಿತಗಳಿಗೆ ಲಭ್ಯವಿರುವ ಕೊಳವೆಬಾವಿಗಳನ್ನು ಫ್ಲಶಿಂಗ್ ಹಾಗೂ ಆಳಗೊಳಿಸುವಂತೆ ಸೂಚಿಸಲಾಗಿದೆ. ನೀರಿನ ಮೂಲಗಳ ಕೊರತೆ ಇರುವ ಪ್ರದೇಶಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲು ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅನುಮತಿ ನೀಡಲಾಗಿದೆ. ಅಗತ್ಯವಿದ್ದಲ್ಲಿ ಭೂವಿಜ್ಞಾನಿಗಳ ವರದಿ ಆಧರಿಸಿ ಹೊಸ ಕೊಳವೆಬಾವಿ ಕೊರೆಯಲು ಹಾಗೂ ಪಂಪ್ ಸೆಟ್‌ಗಳನ್ನು ಅಳವಡಿಸಲು ಸೂಚಿಸಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಕೊರತೆ ತಡೆಯಲು ಜಿಲ್ಲಾ ಮಟ್ಟದಲ್ಲಿ ನಿರಂತರವಾಗಿ ಟಾಸ್ಕ್ ಫೋರ್ಸ್ ಸಭೆಗಳು ನಡೆಯುತ್ತಿದ್ದು, ಸರ್ಕಾರವೂ ಪರಿಸ್ಥಿತಿಯನ್ನು ನಿಯಮಿತವಾಗಿ ಅವಲೋಕಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದೇ ವೇಳೆ ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಪಾಡಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ (KTPP Act) ಮತ್ತು ಆರ್ಥಿಕ ಸಂಹಿತೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಾಮಗಾರಿಗಳ ಭೌತಿಕ ಪ್ರಗತಿ ಆಧರಿಸಿ ಮಾತ್ರ ಬಿಲ್ ಪಾವತಿಸಬೇಕು ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅನುಮೋದನೆ ಕಡ್ಡಾಯ ಎಂದು ತಿಳಿಸಿದ್ದಾರೆ.
ಈ ಅನುದಾನ ಬಿಡುಗಡೆಯಿಂದ ರಾಜ್ಯದ 31 ಜಿಲ್ಲೆಗಳ ಗ್ರಾಮೀಣ ಜನತೆಗೆ ತ್ವರಿತವಾಗಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದ್ದಾರೆ.












