ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯ ಬಳಿಕ ಫಲಿತಾಂಶ ಘೋಷಣೆಯಲ್ಲಿ ಒಂದು ದಿನ ತಡವಾದ ಹಿನ್ನೆಲೆ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆಗ್ರಹಿಸಿದ್ದಾರೆ.
ಶೃಂಗೇರಿ ಕ್ಷೇತ್ರದ ಮರು ಎಣಿಕೆಯ ನಂತರ ಶಾಸಕರಾಗಿ ಆಯ್ಕೆಯಾದ ಡಿ.ಎನ್. ಜೀವರಾಜ್ ಅವರಿಗೆ ವಿಧಾನಸೌಧದಲ್ಲಿ ಸ್ಪೀಕರ್ ಯು.ಟಿ. ಖಾದರ್ ಪ್ರಮಾಣವಚನ ಬೋಧಿಸಿದ ಬಳಿಕ ಮಾತನಾಡಿದ ಅವರು, ಮರು ಎಣಿಕೆಯಲ್ಲಿ ಫಲಿತಾಂಶ ಸ್ಪಷ್ಟವಾದ ಕೂಡಲೇ ಚುನಾವಣಾ ಆಯೋಗದಿಂದ ಪ್ರಮಾಣಪತ್ರ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದ್ದರೂ, ಒಂದು ದಿನ ವಿಳಂಬ ಮಾಡಲಾಗಿದೆ ಎಂದು ಆರೋಪಿಸಿದರು. ಅಧಿಕಾರಿಗಳ ಮೇಲೆ ಒತ್ತಡ ಹಾಕಿದವರು ಯಾರು ಎಂಬುದು ಸಿಬಿಐ ತನಿಖೆಯಿಂದ ಬಯಲಾಗಬೇಕು ಎಂದರು.
ಕಾಂಗ್ರೆಸ್ ಪಕ್ಷದ ವೋಟ್ ಚೋರಿ ಆರೋಪಗಳನ್ನು ತಳ್ಳಿಹಾಕಿದ ಅಶೋಕ, ಸ್ಟ್ರಾಂಗ್ ರೂಮ್ನಲ್ಲಿ ಸಿಸಿಟಿವಿ ಹಾಗೂ ಪೊಲೀಸ್ ಭದ್ರತೆ ಇರುವುದರಿಂದ ಯಾವುದೇ ಅಕ್ರಮ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು. ಶೃಂಗೇರಿ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದ್ದು, ಕೋರ್ಟ್ ಆದೇಶವನ್ನು ಬಿಜೆಪಿ ಗೌರವಿಸುತ್ತದೆ ಎಂದು ಸ್ಪಷ್ಟಪಡಿಸಿದರು.
ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯ ಸೋಲಿನ ಬಗ್ಗೆ ಪಕ್ಷದೊಳಗೆ ಪರಿಶೀಲನೆ ನಡೆಯಲಿದೆ ಎಂದು ಹೇಳಿದ ಅವರು, ಈ ಫಲಿತಾಂಶಗಳು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗುವುದಿಲ್ಲ ಎಂದರು. 2028ರಲ್ಲಿ ಎನ್ಡಿಎ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ, ತಾವು ಗ್ಯಾರಂಟಿಗಳ ವಿರೋಧಿ ಅಲ್ಲ, ಆದರೆ ಅವೈಜ್ಞಾನಿಕ ಗ್ಯಾರಂಟಿಗಳನ್ನು ವಿರೋಧಿಸುವುದಾಗಿ ಹೇಳಿದರು. ತಮಿಳುನಾಡಿನಲ್ಲಿ ನಟ ವಿಜಯ್ ನೀಡಿರುವ ಭರವಸೆಗಳ ಉದಾಹರಣೆ ನೀಡಿ, ಇಂತಹ ಘೋಷಣೆಗಳು ಅನುಷ್ಠಾನಕ್ಕೆ ಅಸಾಧ್ಯವಾಗಬಹುದು ಎಂದರು.
ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಮೇ 10ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದು, ಎಚ್ಎಎಲ್ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಪ್ರಧಾನಿ ಸುಮಾರು ಅರ್ಧ ಗಂಟೆ ಭಾಷಣ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.












