ಚಾಮರಾಜನಗರ: ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರದಲ್ಲಿ ಕೆಲವೇ ದಿನಗಳ ಅಂತರದಲ್ಲಿ ಮೂರು ಚಿರತೆ ದಾಳಿಗಳು ನಡೆದು ಇಬ್ಬರು ಅಮಾಯಕ ಭಕ್ತರು ಪ್ರಾಣ ಕಳೆದುಕೊಂಡ ಘಟನೆಗಳು ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಬಯಲು ಮಾಡಿವೆ ಎಂದು ಆರೋಪಿಸಲಾಗುತ್ತಿದೆ.
ಭಕ್ತರು ದೇವರ ದರ್ಶನಕ್ಕೆ ಬರುವ ವೇಳೆ ತಮ್ಮ ಜೀವಕ್ಕೆ ಹಾನಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕ್ಷೇತ್ರದಲ್ಲಿ ಕಾಡು ಪ್ರಾಣಿಗಳ ದಾಳಿ ಹೆಚ್ಚಾಗುತ್ತಿರುವುದಕ್ಕೆ ಸೂಕ್ತ ಭದ್ರತಾ ಕ್ರಮಗಳು, ನಿಯಂತ್ರಣ ವ್ಯವಸ್ಥೆ ಹಾಗೂ ತುರ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಭಕ್ತರು ಆತಂಕಕ್ಕೀಡಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ದೇವಸ್ಥಾನದ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಸಂಗ್ರಹವಾಗುತ್ತಿರುವುದರಿಂದ ಪ್ರವೇಶ ಶುಲ್ಕ, ವಾಹನ ಶುಲ್ಕಗಳ ಮೂಲಕ ದೊಡ್ಡ ಮೊತ್ತದ ಆದಾಯ ಬರುತ್ತಿದ್ದರೂ, ಭಕ್ತರ ಸುರಕ್ಷತೆಗೆ ಕನಿಷ್ಠ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಖಂಡನೀಯ ಎಂದು ವಿರೋಧಿಗಳು ಹೇಳುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬ ಪ್ರಶ್ನೆಗಳು ಎದ್ದಿವೆ. ಭಕ್ತರ ಜೀವಕ್ಕಿಂತ ಹಣ ಸಂಗ್ರಹವೇ ಮುಖ್ಯವಾಗಿದೆಯೇ ಎಂಬ ಆರೋಪವೂ ಕೇಳಿಬರುತ್ತಿದೆ.
ಸರ್ಕಾರ ಎಚ್ಚರಗೊಳ್ಳಬೇಕು:
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯದಲ್ಲಿ ತಕ್ಷಣ ಗಮನ ಹರಿಸಿ, ಭಕ್ತರ ಸುರಕ್ಷತೆಗಾಗಿ ಶಾಶ್ವತ ಮತ್ತು ಕಠಿಣ ಕ್ರಮಗಳನ್ನು ಜಾರಿಗೆ ತರಬೇಕು ಎಂಬ ಆಗ್ರಹಗಳು ಹೆಚ್ಚಾಗುತ್ತಿವೆ.
ಕ್ಷೇತ್ರದಲ್ಲಿ ವನ್ಯಜೀವಿ ದಾಳಿ ತಡೆಗಟ್ಟುವ ನಿಟ್ಟಿನಲ್ಲಿ ಭದ್ರತಾ ಬಲ ಹೆಚ್ಚಳ, ಗಡಿ ಪ್ರದೇಶಗಳಲ್ಲಿ ನಿಗಾ, ತುರ್ತು ವೈದ್ಯಕೀಯ ಸಹಾಯಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಭಕ್ತರು ಹಾಗೂ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.












