ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಳ್ಳುತ್ತಿರುವ ಕ್ರಮಗಳಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡಿರುವುದು ದಿಟ್ಟ ಕ್ರಮ ಎಂದು ಅವರು ಶ್ಲಾಘಿಸಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, “ಪಹಲ್ಗಾಮ್ ಘಟನೆ ಅಮಾನವೀಯವಾಗಿದೆ. ಮೊದಲ ಬಾರಿಗೆ ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ಮಾಡಿದ್ದಾರೆ. ಇದು ಅತ್ಯಂತ ಹೇಯ ಕೃತ್ಯ. ಈ ದಾಳಿ ಮಾಡಿದವರಿಗೆ ತಕ್ಕ ಶಾಸ್ತಿ ಆಗಲೇಬೇಕು. ಈ ಹಿನ್ನೆಲೆಯಲ್ಲಿ ಪ್ರಧಾನಿಗಳು ಕೈಗೊಳ್ಳುವ ಎಲ್ಲಾ ನಿರ್ಧಾರಗಳಿಗೆ ಜೆಡಿಎಸ್ ಬದ್ಧವಾಗಿರುತ್ತದೆ,” ಎಂದು ಹೇಳಿದರು.
ರಕ್ಷಣಾ ಪಡೆಗಳಿಗೆ ಪ್ರಧಾನಿ ಮೋದಿ ಮುಕ್ತ ಸ್ವಾತಂತ್ರ್ಯ ನೀಡಿರುವುದನ್ನು ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದರು. “ಮೊದಲ ಬಾರಿಗೆ ದೇಶದ ಪ್ರಧಾನಿಯೊಬ್ಬರು ಇಂತಹ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಇತಿಹಾಸದಲ್ಲಿ ಇಂತಹ ಕ್ರಮ ಈ ಹಿಂದೆ ಎಂದೂ ಆಗಿರಲಿಲ್ಲ,” ಎಂದು ಅವರು ತಿಳಿಸಿದರು.
“ಇಡೀ ದೇಶ ಪ್ರಧಾನಿ ಮೋದಿಯವರ ಜೊತೆ ನಿಂತಿದೆ. ಎಲ್ಲಾ ರಾಜಕೀಯ ಪಕ್ಷಗಳು ಅವರ ನಿರ್ಧಾರವನ್ನು ಬೆಂಬಲಿಸಿವೆ. ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸುವ ಅಗತ್ಯವಿದೆ,” ಎಂದು ದೇವೇಗೌಡರು ಒತ್ತಿ ಹೇಳಿದರು.
1971ರ ಯುದ್ಧ ಕಾಲಕ್ಕೂ ಈಗಿನ ಪರಿಸ್ಥಿತಿಗೂ ತೀವ್ರ ವ್ಯತ್ಯಾಸವಿದೆ ಎಂದು ಅವರು ನುಡಿದರು. “ಭಾರತ ಅಗಾಧವಾಗಿ ಬೆಳೆದಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಮತ್ತು ಬದಲಾವಣೆ ಕಂಡಿದೆ,” ಎಂದು ಅವರು ಹೇಳಿದರು. “ಇಲ್ಲಿ ಹಿಂದೂ-ಮುಸ್ಲಿಂ ಎಂಬ ಪ್ರಶ್ನೆ ಇಲ್ಲ. ಧರ್ಮ ಅಥವಾ ಜಾತಿ ವಿಚಾರ ಉದ್ಭವಿಸುವುದಿಲ್ಲ. ದೇಶದ ಭದ್ರತೆಯೇ ಮುಖ್ಯ,” ಎಂದು ಮಾಜಿ ಪ್ರಧಾನಿ ಸ್ಪಷ್ಟಪಡಿಸಿದರು.
ಜಾತಿ ಗಣತಿ ವಿಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಟೀಕೆ
ಜಾತಿ ಗಣತಿಯ ವಿಷಯದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೇವೇಗೌಡರು ತೀವ್ರವಾಗಿ ಟೀಕಿಸಿದರು. “ಕರ್ನಾಟಕದ ಜಾತಿ ಗಣತಿಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲೇ ಒಮ್ಮತವಿಲ್ಲ. ಈ ಬಗ್ಗೆ ನಾನು ಅವರಿಗೆ ಪತ್ರ ಬರೆದಿದ್ದೆ, ಆದರೆ ಯಾವುದೇ ಉತ್ತರ ಬಂದಿಲ್ಲ,” ಎಂದು ಅವರು ಹೇಳಿದರು.
“ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ ಮುಖ್ಯಮಂತ್ರಿಯ ಕಚೇರಿಯಲ್ಲಿ ಎಷ್ಟು ಹಿಂದುಳಿದವರು ಇದ್ದಾರೆ? ಅವರ ಸಮುದಾಯದ ಉದ್ಯೋಗಿಗಳು ಎಷ್ಟಿದ್ದಾರೆ? ಇದನ್ನು ಅವರು ಹೇಳಬೇಕು,” ಎಂದು ದೇವೇಗೌಡರು ಪ್ರಶ್ನಿಸಿದರು.
“ಜಾತಿ ಸಮೀಕ್ಷೆಯ ಮೂಲಕ ಬೆಣ್ಣೆ ತಿಂದು, ಉಳಿದವರಿಗೆ ನೀರು ಮಜ್ಜಿಗೆ ಕೊಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಇದು ಸರಿಯಲ್ಲ,” ಎಂದು ಅವರು ಕಿಡಿಕಾರಿದರು.












