ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯ ನಂತರ ದೇಶದ ರಾಜಕೀಯ ಪರಿಸ್ಥಿತಿ ಸಂಪೂರ್ಣ ಬದಲಾವಣೆ ಕಾಣಲಿದೆ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬದಲಾವಣೆಯ ಪರಿಣಾಮ ಕರ್ನಾಟಕದ ಮೇಲೂ ಬೀಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯ ನಾಯಕ ಎಂದು ಹೇಳಿಕೊಂಡ ಇಬ್ರಾಹಿಂ, “ಇದನ್ನು ಕಾಂಗ್ರೆಸ್‌ನವರೇ ಹೇಳಬೇಕು, ನಾನ್ಯಾಕೆ ಹೇಳಲಿ? ನಾನು ಪಕ್ಷದೊಳಗೆ ಇಲ್ಲ, ಮನೆಯ ಹೊರಗೆ ಇದ್ದೇನೆ” ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ರಾಜಕಾರಣದಲ್ಲಿ ನಿವೃತ್ತಿ ಎಂಬುದೇ ಇಲ್ಲ ಎಂದು ಗಟ್ಟಿಯಾಗಿ ಹೇಳಿದ ಇಬ್ರಾಹಿಂ, “ಮತ್ತೆ ನಿಲ್ಲಬೇಕು ಎಂಬ ಆಸೆಯೇ ಎಲ್ಲರಲ್ಲೂ ಇರುತ್ತದೆ. ಸಿದ್ದರಾಮಯ್ಯ ಅವರು ಮತ್ತೆ ಸ್ಪರ್ಧಿಸಲಿ, ನನಗೆ ಅದಕ್ಕೆ ಬಹಳ ಸಂತೋಷ. ಈ ಹಿಂದೆ ಅವರ ಚುನಾವಣೆಯನ್ನು ನಾನೇ ನಡೆಸಿಕೊಟ್ಟಿದ್ದೆ. ಅವರ ಆರೋಗ್ಯ ಚೆನ್ನಾಗಿರಲಿ” ಎಂದು ಶುಭ ಹಾರೈಸಿದ್ದಾರೆ.












