ಬೆಂಗಳೂರು: ಮುಂಬರುವ ವಿಧಾನ ಪರಿಷತ್‌ನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗಳಿಗೆ ಸಂಬಂಧಿಸಿದಂತೆ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಅವರು ಮಂಗಳವಾರ ಸಭೆ ನಡೆಸಿ, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಕ್ಷಕರ ನೋಂದಣಿ ಮಾಡಿಸುವಂತೆ ಕರೆ ನೀಡಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಈ ಸಭೆಯಲ್ಲಿ ಪಕ್ಷದ ಪ್ರಮುಖ ಮುಖಂಡರು, ವಿವಿಧ ಘಟಕಗಳ ಮುಖ್ಯಸ್ಥರು ಮತ್ತು ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮುಂದಿನ ವರ್ಷ ನಡೆಯಲಿರುವ ಮೇಲ್ಮನೆ ಚುನಾವಣೆಗೆ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ರಮೇಶ್ ಗೌಡ ಒತ್ತಿ ಹೇಳಿದರು.
“ಎನ್ಡಿಎ ಮೈತ್ರಿಕೂಟ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ನಿರುದ್ಯೋಗ ಸಮಸ್ಯೆ ತೊಡೆದುಹಾಕುವಲ್ಲಿ, ಪದವೀಧರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವಲ್ಲಿ ಮತ್ತು ಯುವನಿಧಿ ಗ್ಯಾರಂಟಿ ಯೋಜನೆಯ ಸಮರ್ಪಕ ಜಾರಿಯಲ್ಲಿ ವೈಫಲ್ಯ ಕಂಡಿದೆ” ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರನ್ನು ಸಂಘಟಿಸಿ, ಅವರ ಸಂಕಷ್ಟಗಳನ್ನು ಈಡೇರಿಸಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ, ಪ್ರಸ್ತುತ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕೊಡುಗೆಗಳನ್ನು ಶಿಕ್ಷಕರಿಗೆ ತಿಳಿಸಬೇಕು ಎಂದು ರಮೇಶ್ ಗೌಡ ಕಿವಿಮಾತು ಹೇಳಿದರು.
ಸಭೆಯಲ್ಲಿ ಕರ್ನಾಟಕ ವಿಧಾನ ಪರಿಷತ್ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಸ್.ಎಲ್. ಭೋಜೇಗೌಡ, ಶಾಸಕರಾದ ಜವರಾಯಿ ಗೌಡ, ಟಿ.ಎ. ಶರವಣ, ಮಾಜಿ ಶಾಸಕರಾದ ಕೆ.ಎ. ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ, ಪಕ್ಷದ ನಗರ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಸಂತೋಜಿ ರಾವ್ ಸೇರಿದಂತೆ ಇತರ ಮುಖಂಡರು ಭಾಗವಹಿಸಿದ್ದರು.












