ಹುಬ್ಬಳ್ಳಿ: ಉತ್ತಮ ಜೀವನ ಶೈಲಿಯನ್ನು ಅನುಸರಿಸುವ ಮೂಲಕ ಖಾಯಿಲೆಗಳನ್ನು ದೂರವಿಡಲು ಸಾಧ್ಯವಿದೆ. ಪ್ರತಿಯೊಬ್ಬರೂ ಹೃದಯದ ಬಗ್ಗೆ ಬಹಳ ಕಾಳಜಿ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ಶಿರೂರ ಪಾರ್ಕ ರಸ್ತೆಯಲ್ಲಿರುವ ವಿಹಾನ ಹಾರ್ಟ್ ಮತ್ತು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ನೂತನ ಅತ್ಯಾಧುನಿಕ ಓ.ಸಿ.ಟಿ ಯಂತ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಹೃದಯದ ಬಗ್ಗೆ ನಾವು ಬಹಳ ನಿರ್ಲಕ್ಷ್ಯ ಮಾಡುತ್ತೇವೆ. ಯಾವುದೇ ಅಂಗಾಂಗ ನಿರಂತರ ಕೆಲಸ ಮಾಡುತ್ತಿದ್ದರೆ ಅದು ಹೃದಯ. ಹೃದಯಕ್ಕೆ ವಿಶ್ರಾಂತಿ ಇಲ್ಲ. ಭಾವನೆಗಳನ್ನು ಹೃದಯಕ್ಕೆ ಸಂಬಂಧಿಸುತ್ತಾರೆ ಸಾಹಿತಿಗಳು ಮತ್ತು ಜನರು. ನಿಮ್ಮ ಹೃದಯಕ್ಕೆ ಖಾಯಿಲೆ ಬಂದಿದ್ದರೆ ಅಂದರೆ ನಿಮ್ಮ ಹೃದಯ ನಿಮ್ಮ ಮೇಲೆ ಸಿಟ್ಟಾಗಿದೆ ಎಂದರ್ಥ. ವಯಸ್ಸಾದ ಮೇಲೆ ಹಾರ್ಟ್ ಅಟ್ಯಾಕ್ ಬಂದರೆ ಬಹಳಷ್ಟು ಜನರು ಉಳಿಯುತ್ತಾರೆ. ಆದರೆ ಯುವಕರಲ್ಲಿ ಹಾರ್ಟ್ ಅಟ್ಯಾಕ್ ಬಂದರೆ ರಕ್ಷಣೆಗೆ ಹೆಚ್ಚಿನ ಕಷ್ಟವಾಗುತ್ತದೆ” ಎಂದು ಅವರು ತಿಳಿಸಿದರು.
ಪ್ರತಿಯೊಬ್ಬರೂ ಹೃದಯದ ಬಗ್ಗೆ ಕಾಳಜಿ ವಹಿಸಿ, ಉತ್ತಮ ಜೀವನ ಶೈಲಿಯಿಂದ ಖಾಯಿಲೆಗಳನ್ನು ತಡೆಗಟ್ಟಬಹುದು ಎಂದ ಅವರು, ವಿಹಾನ ಆಸ್ಪತ್ರೆ ಕೇವಲ ಎರಡು ವರ್ಷಗಳಲ್ಲಿ ಉತ್ತಮ ಹೆಸರು ಗಳಿಸಿದೆ. ಬೆಂಗಳೂರಿನ ಯಾವುದೇ ಕಾರ್ಪೊರೇಟ್ ಆಸ್ಪತ್ರೆಗೂ ಕಡಿಮೆಯಿಲ್ಲದ ಸೌಲಭ್ಯಗಳಿವೆ ಎಂದು ಹೇಳಿದರು.
ಡಾ. ಮಂಜುನಾಥ್ ಅವರ ಸೇವೆ ಅಪಾರವಾದುದು. ಹೃದಯದ ಬಡಿತದಂತೆಯೇ ಅವರು ಕೆಲಸ ಮಾಡುತ್ತಾರೆ. ಆಯಾಸವಿಲ್ಲದೆ ಪ್ರತಿದಿನ ಸಾವಿರಾರು ಜನರಿಗೆ ನಗುಮುಖದಲ್ಲಿ ಉತ್ತರ ನೀಡುತ್ತಾರೆ. ಜಯದೇವ ಹೃದ್ರೋಗ ಸಂಸ್ಥೆಯನ್ನು ಮೈಸೂರು, ಗುಲ್ಬರ್ಗಾ ಮತ್ತು ಹುಬ್ಬಳ್ಳಿಯಲ್ಲಿ ಆರಂಭಿಸಿದ್ದಾರೆ. ಅಮೆರಿಕದಲ್ಲಿ ಹಾರ್ಟ್ ಆಪರೇಷನ್‌ಗೆ 60-70 ಲಕ್ಷ ರೂ. ವೆಚ್ಚವಾದರೆ, ಇಲ್ಲಿ ಕೇವಲ 2 ಲಕ್ಷ ರೂ.ಗಳಲ್ಲಿ ಮಾಡುತ್ತಾರೆ. ಇದನ್ನು ನೋಡಲು ಅಮೆರಿಕದ ವೈದ್ಯರು ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಹೋಗಿದ್ದಾರೆ ಎಂದು ಬೊಮ್ಮಾಯಿ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ನಿರ್ದೇಶಕ ಹಾಗೂ ಸಂಸದ ಡಾ. ಸಿ.ಎನ್. ಮಂಜುನಾಥ, ಆಸ್ಪತ್ರೆ ಮುಖ್ಯಸ್ಥ ಡಾ. ವಿಜಯಕೃಷ್ಣ ಕೋಳೂರ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ, ವೈದ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.












