ಬೆಂಗಳೂರು: ಕರ್ನಾಟಕ-ಕೇರಳ ನಡುವಿನ ಭಾಷಾ ವಿವಾದ ತಾರಕಕ್ಕೇರಿದ್ದು, ಬಿಜೆಪಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ನಾಯಕಿ ಮತ್ತು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಗುರಿಯಾಗಿಸಿ ತೀವ್ರ ಟೀಕೆ ಮಾಡಿದ್ದಾರೆ. ಕೇರಳ ಸರ್ಕಾರದ ಮಲಯಾಳಂ ಭಾಷಾ ಮಸೂದೆ-2025ರ ಅಡಿಯಲ್ಲಿ ಎಲ್ಲಾ ಶಾಲೆಗಳಲ್ಲಿ (ಕನ್ನಡ ಮಾಧ್ಯಮ ಶಾಲೆಗಳ ಸೇರಿದಂತೆ) 1ರಿಂದ 10ನೇ ತರಗತಿವರೆಗೆ ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ಇದು ಕಾಸರಗೋಡು ಪ್ರದೇಶದ ಕನ್ನಡ ಮಾತನಾಡುವ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಪ್ರಹಾರ ಎಂದು ಆರೋಪಿಸಲಾಗಿದೆ.
ಅಶೋಕ್ ಅವರು ತಮ್ಮ ಟ್ವೀಟ್‌ನಲ್ಲಿ, “ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾಗಿ ಸತ್ತರೂ, ವಯನಾಡಿನಲ್ಲಿ ಪ್ರಕೃತಿ ವಿಕೋಪ ಉಂಟಾದರೂ ಕೇರಳಿಗರ ಪರವಾಗಿ ಕರ್ನಾಟಕ ಸರ್ಕಾರದ ಮೇಲೆ ಸವಾರಿ ಮಾಡುವ ಪ್ರಿಯಾಂಕಾ ಗಾಂಧಿ ಅವರು, ಈಗ ಕನ್ನಡಿಗರ ಪರ ನಿಲ್ಲುತ್ತಾರಾ?” ಎಂದು ಪ್ರಶ್ನಿಸಿದ್ದಾರೆ. ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವ ಬಗ್ಗೆ ಪ್ರಿಯಾಂಕಾ ಅವರು ಕೇರಳದ ಪರ ಒತ್ತಾಯಿಸಿದ್ದನ್ನು ಉಲ್ಲೇಖಿಸಿ, ಇದೇ ಕಾಳಜಿಯನ್ನು ಕನ್ನಡಿಗರಿಗಾಗಿ ತೋರುತ್ತಾರಾ ಎಂದು ಕೇಳಿದ್ದಾರೆ.
ಇದಲ್ಲದೆ, ಕೋಗಿಲು ಲೇಔಟ್‌ನ ಅಕ್ರಮ ನಿರ್ಮಾಣ ತೆರವುಗೊಳಿಸುವಿಕೆಯ ಬಳಿಕ “ಮಾನವೀಯತೆ”ಯ ಹೆಸರಿನಲ್ಲಿ ಪುನರ್ವಸತಿ ನೀಡುವ ಬಗ್ಗೆ ಮಾತನಾಡಿದ ಕೆ.ಸಿ. ವೇಣುಗೋಪಾಲ್ ಅವರನ್ನು ಟೀಕಿಸಿ, “ಅಕ್ರಮ ವಲಸಿಗರ ಪರ ಮಿಡಿಯುವ ಹೃದಯ ಕಾಸರಗೋಡಿನ ಕನ್ನಡಿಗರಿಗಾಗಿ ಮಿಡಿಯುವುದಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಅಶೋಕ್ ಅವರು ಕಾಂಗ್ರೆಸ್ ಪಕ್ಷದ ಕೇರಳ ಘಟಕವನ್ನು ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿ, ಕನ್ನಡಿಗರು ತಕ್ಕ ಪ್ರತಿಕ್ರಿಯೆ ನೀಡುವ ದಿನ ದೂರವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.












