ಬೆಂಗಳೂರು: ವಿರೋಧ ಪಕ್ಷಗಳು ರಾಜ್ಯ ಸರ್ಕಾರ ಸಾಲದ ಮೇಲೆಯೇ ಆಡಳಿತ ನಡೆಸುತ್ತಿದೆ ಎಂದು ಟೀಕಿಸುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಅವರು, “ಯಾವುದೇ ದೇಶ ಅಥವಾ ರಾಜ್ಯವಾಗಲಿ ಸಾಲ ಮಾಡದೆ ಆಡಳಿತ ನಡೆಸಲು ಸಾಧ್ಯವಿಲ್ಲ. ಜನಪರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಸಾಲ ಮಾಡುವುದು ಅನಿವಾರ್ಯ” ಎಂದು ಸ್ಪಷ್ಟಪಡಿಸಿದರು.
ನಮ್ಮ ಸರ್ಕಾರ ಇತರ ರಾಜ್ಯಗಳಿಗೆ ಹೋಲಿಸಿದರೆ ಸಾಲವನ್ನು ಮಿತಿಯೊಳಗೆ ಇಟ್ಟಿದೆ. ಮಾಡಿರುವ ಸಾಲದ ಬಹುಪಾಲು ಆರ್ಥಿಕವಾಗಿ ಹಿಂದುಳಿದವರನ್ನು ಸಶಕ್ತಗೊಳಿಸುವ ಜನಪರ ಯೋಜನೆಗಳಿಗೆ ವ್ಯಯವಾಗುತ್ತಿದೆ ಎಂದು ಅವರು ತಿಳಿಸಿದರು.
ಹಿಂದಿನ ಸರ್ಕಾರಗಳ ಅವಧಿಯಲ್ಲೂ ಸಾಲ ಮಾಡಲಾಗಿದೆ. ಐದು ವರ್ಷಕ್ಕೊಮ್ಮೆ ಸಾಲ ಎರಡು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತಾ, “ನಮ್ಮ ಸರ್ಕಾರ 1.32 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ. ಆದರೆ ಸ್ವಾತಂತ್ರ್ಯದಿಂದ ಇಲ್ಲಿಯವರೆಗೆ ರಾಜ್ಯದ ಒಟ್ಟು ಸಾಲ 8 ಲಕ್ಷ 24 ಸಾವಿರ ಕೋಟಿ ರೂಪಾಯಿಗೆ ತಲುಪಿದೆ” ಎಂದು ವಿವರಿಸಿದರು.
ಈ ಸಾಲಿನ ಬಜೆಟ್ ಗಾತ್ರ 4,48,004 ಕೋಟಿ ರೂಪಾಯಿ ಇರುವಾಗ ಸರ್ಕಾರ ಸಾಲದ ಮೇಲೆ ನಡೆಯುತ್ತಿದೆ ಎಂದು ಹೇಗೆ ಹೇಳುವುದು? ನಮ್ಮ ಬಜೆಟ್ ಸಾಲದ ಬಜೆಟ್ ಎಂದು ಕರೆಯುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳನ್ನು ಪ್ರಶ್ನಿಸಿದರು.
2025-26ರಲ್ಲಿ 2 ಲಕ್ಷ 92 ಸಾವಿರ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದ್ದು, 2026-27ರಲ್ಲಿ 3 ಲಕ್ಷ 15 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ಸಾಲ ಹೆಚ್ಚಿದೆ ಎಂಬ ಆರೋಪ ಸುಳ್ಳು. ಕೇಂದ್ರ ಸರ್ಕಾರ ಜಿಎಸ್ಟಿ ಪರಿಹಾರವನ್ನು ನಿಲ್ಲಿಸಿರುವುದರಿಂದ ರಾಜ್ಯಕ್ಕೆ ಆರ್ಥಿಕ ನಷ್ಟವಾಗಿದೆ. ಗ್ಯಾರಂಟಿ ಯೋಜನೆಗಳು ಜನರ ತಲಾ ಆದಾಯ ಹೆಚ್ಚಿಸಿವೆ. ಇದುವರೆಗೆ 1.31 ಲಕ್ಷ ಕೋಟಿ ರೂಪಾಯಿ ಗ್ಯಾರಂಟಿಗಳಿಗೆ ವೆಚ್ಚ ಮಾಡಲಾಗಿದೆ ಎಂದು ಸಿಎಂ ವಿವರಿಸಿದರು.
ಮಹಾರಾಷ್ಟ್ರ ಸರ್ಕಾರ ಜನಕಲ್ಯಾಣ ಯೋಜನೆಗಳ ಅನುದಾನ ಕಡಿಮೆ ಮಾಡಿದರೆ, ನಮ್ಮ ಸರ್ಕಾರ ಗ್ಯಾರಂಟಿಗಳಿಗೆ ಅನುದಾನ ಕಡಿಮೆ ಮಾಡಿಲ್ಲ ಎಂದು ಹೇಳಿದರು. ಜಿಎಸ್ಟಿ ಜಾರಿಯಾದಾಗಿನಿಂದ ಕೇಂದ್ರ ನೀಡುತ್ತಿದ್ದ ಪರಿಹಾರ ನಮ್ಮ ಸರ್ಕಾರ ಬಂದ ನಂತರ ನಿಲ್ಲಿಸಲಾಗಿದೆ. ಇದರಿಂದ ರಾಜ್ಯಕ್ಕೆ ನಷ್ಟವಾಗಿದೆ. ಕೆಲವು ರಾಜ್ಯಗಳು ಪರಿಹಾರ ಮುಂದುವರಿಸುವಂತೆ ಮನವಿ ಮಾಡಿದರೂ ಕೇಂದ್ರ ಮಲತಾಯಿ ದೋರಣಿ ತಳೆದಿದೆ ಎಂದು ಟೀಕಿಸಿದರು.
ಹಿಂದಿನ ತಮ್ಮದೇ ಸರ್ಕಾರದ ಅವಧಿಯಲ್ಲಿ ನಾಲ್ಕು ವರ್ಷಗಳಲ್ಲಿ ಬಿಬಿಎಂಪಿಗೆ 10,435 ಕೋಟಿ ರೂಪಾಯಿ ನೀಡಿದ್ದರೆ, ನಮ್ಮ ಸರ್ಕಾರ ನಾಲ್ಕು ವರ್ಷಗಳಲ್ಲಿ 20,200 ಕೋಟಿ ರೂಪಾಯಿ ನೀಡಿದೆ. ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೂ ಅನುದಾನ ಒದಗಿಸುತ್ತಿದ್ದೇವೆ. ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕೆಲಸಗಳಿಗೂ ವೆಚ್ಚ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಸಾಮಾಜಿಕ ಭದ್ರತಾ ಯೋಜನೆಗಳಿಗೆ 10,600 ಕೋಟಿ ರೂಪಾಯಿ ಮೀಸಲಿಡಲಾಗಿದೆ. ನಮ್ಮ ಸರ್ಕಾರ ಯೂನಿವರ್ಸಲ್ ಬೇಸಿಕ್ ಇನ್ಕಮ್ ಹಾಗೂ ಬೇಡಿಕೆ ಆಧಾರಿತ ಆರ್ಥಿಕ ತತ್ವಗಳನ್ನು ಅನುಸರಿಸುತ್ತಿದೆ. ಬುದ್ಧನ ಕರುಣೆ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಆಧಾರದಲ್ಲಿ ಈ ಬಜೆಟ್ ರೂಪುಗೊಂಡಿದೆ. ಇದು ಅಭಿವೃದ್ಧಿಪರ ಮತ್ತು ಜನಪರ ಬಜೆಟ್ ಎಂದು ಅವರು ಒತ್ತಿ ಹೇಳಿದರು.
ವಿರೋಧ ಪಕ್ಷಗಳು ಕೇವಲ ರಾಜಕೀಯಕ್ಕಾಗಿ ಅಪಪ್ರಚಾರ ಮಾಡುತ್ತಿವೆ ಎಂದು ಟೀಕಿಸುತ್ತಾ, “ರಾಜಕೀಯಕ್ಕಾಗಿ ವಿರೋಧ ಮಾಡುವುದು ಸರಿಯಲ್ಲ” ಎಂದು ಸಿದ್ದರಾಮಯ್ಯ ಹೇಳಿದರು.












