ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗಿದೆ ಎಂಬ ಸುಳ್ಳು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ವದಂತಿಗಳಿಂದ ಸಾರ್ವಜನಿಕರು ಅನಗತ್ಯ ಆತಂಕಕ್ಕೊಳಗಾಗಿ ಪೆಟ್ರೋಲ್ ಬಂಕ್‌ಗಳಲ್ಲಿ ಬಾಟಲಿ, ಕ್ಯಾನ್‌ಗಳೊಂದಿಗೆ ಸರತಿ ಸಾಲುಗಳಲ್ಲಿ ನಿಂತು ಇಂಧನ ಸಂಗ್ರಹಿಸುತ್ತಿರುವುದು ಕಂಡುಬಂದಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಇದಕ್ಕೆ ಸ್ಪಷ್ಟೀಕರಣ ನೀಡಿದ್ದು, ಯಾವುದೇ ಇಂಧನ ಕೊರತೆ ಇಲ್ಲ ಎಂದು ತಿಳಿಸಿದೆ. ಕೇಂದ್ರ ಸರ್ಕಾರದಿಂದ ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಸುಗಮವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಸಾಕಷ್ಟು ದಾಸ್ತಾನು ಲಭ್ಯವಿದ್ದು, ಎಲ್ಲೆಡೆ ಸಾಮಾನ್ಯ ಪೂರೈಕೆಯಾಗುತ್ತಿದೆ ಎಂದು ಇಲಾಖೆ ಹೇಳಿದೆ.
“ಇಂಧನ ಕೊರತೆಯ ಬಗ್ಗೆ ಹರಡುತ್ತಿರುವ ಸುದ್ದಿಗಳು ಕೇವಲ ವದಂತಿಗಳು ಮಾತ್ರ. ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡುವ ಅಗತ್ಯವಿಲ್ಲ” ಎಂದು ಇಲಾಖೆ ಮನವಿ ಮಾಡಿದೆ.
ಸುರಕ್ಷತೆಯ ಎಚ್ಚರಿಕೆ:
ಪೆಟ್ರೋಲ್ ಬಂಕ್‌ಗಳು ವಾಹನಗಳ ಇಂಧನ ಟ್ಯಾಂಕ್‌ಗಳಿಗೆ ಮಾತ್ರ ನೇರವಾಗಿ ಇಂಧನ ಪೂರೈಸುತ್ತವೆ. ಬಾಟಲಿ, ಕ್ಯಾನ್ ಅಥವಾ ಪ್ರತ್ಯೇಕ ಕಂಟೈನರ್‌ಗಳಲ್ಲಿ ಇಂಧನ ನೀಡುವುದು ಕಾನೂನುಬಾಹಿರ ಹಾಗೂ ಅತ್ಯಂತ ಅಪಾಯಕಾರಿ. ಇದು ಅಗ್ನಿ ಅನಾಹುತಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ.
ಇಂಧನವನ್ನು ಕೇವಲ ವಾಹನಗಳ ಟ್ಯಾಂಕ್‌ಗಳಿಗೆ ಮಾತ್ರ ಭರ್ತಿ ಮಾಡಬೇಕು. ಬಾಟಲಿ ಅಥವಾ ಕಂಟೈನರ್‌ಗಳಲ್ಲಿ ಇಂಧನ ನೀಡದಂತೆ ಪೆಟ್ರೋಲ್ ಬಂಕ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸಾರ್ವಜನಿಕರು ಸಹಕರಿಸಿ, ಅಗತ್ಯಕ್ಕಿಂತ ಹೆಚ್ಚಿನ ಇಂಧನ ಸಂಗ್ರಹಿಸಿ ಆತಂಕ ಸೃಷ್ಟಿಸಬಾರದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಗರಾಜ್ ಬಿ.ಇ. ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಸರ್ಕಾರದ ಮನವಿ: ವದಂತಿಗಳಿಗೆ ಕಿವಿಗೊಡದೆ, ಸಾಮಾನ್ಯವಾಗಿ ಇಂಧನ ಬಳಸಿ. ಅಧಿಕೃತ ಮೂಲಗಳಿಂದ ಮಾತ್ರ ಮಾಹಿತಿ ಪಡೆಯಿರಿ.












