ಬೆಂಗಳೂರು: ನುಡಿದಂತೆ ನಡೆಯದ ಕಾಂಗ್ರೆಸ್ ಸರ್ಕಾರ ಆಶಾ ಕಾರ್ಯಕರ್ತೆಯರ ನ್ಯಾಯಸಮ್ಮತ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಬಿಜೆಪಿ ನಾಯಕ ಆರ್. ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ.
ಗ್ಯಾರಂಟಿ ಅನುಷ್ಠಾನ ಸಮಿತಿಗಳ ಹೆಸರಿನಲ್ಲಿ ಪಕ್ಷದ ಅತೃಪ್ತರಿಗೆ ‘ಗಂಜಿ ಕೇಂದ್ರ’ಗಳನ್ನು ತೆರೆದು ಕೋಟಿ ಕೋಟಿ ರುಪಾಯಿ ಹಂಚುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ, ಮನೆಮನೆಗೆ ತೆರಳಿ ಜನಸೇವೆ ಮಾಡುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಹಣವಿಲ್ಲ ಎನ್ನುವುದು ದೊಡ್ಡ ವಿಪರ್ಯಾಸ ಎಂದು ಅವರು ಹೇಳಿದ್ದಾರೆ.
ಚುನಾವಣೆಗೂ ಮುನ್ನ ಭರವಸೆಗಳ ಸುರಿಮಳೆ ಸುರಿಸಿದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಬಳಿಕ ಮಹಿಳಾ ಕಾರ್ಯಕರ್ತೆಯರ ಶ್ರಮಕ್ಕೆ ಅವಮಾನ ಮಾಡುತ್ತಿದೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ. “ಇದೇ ಕಾಂಗ್ರೆಸ್ ಸರ್ಕಾರದ ನಿಜ ಮುಖ” ಎಂದು ಅವರು ಹೇಳಿದ್ದಾರೆ.
ರಾಜ್ಯದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು ಎನಿಸಿರುವ ಆಶಾ ಕಾರ್ಯಕರ್ತೆಯರನ್ನು ನಿರ್ಲಕ್ಷಿಸಿರುವುದು ಕ್ಷಮಿಸಲಾಗದ ದ್ರೋಹ ಎಂದು ಆರ್. ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.












