ಬೆಂಗಳೂರು: ಕುಮಾರಸ್ವಾಮಿ ಅವರು ತಮ್ಮ ಬಗ್ಗೆ ಟೀಕೆ ಮಾಡದಿದ್ದರೆ ರಾಜಕೀಯವಾಗಿ ಬದುಕುವುದು ಕಷ್ಟ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಡದಿ ಟೌನ್‌ಶಿಪ್ ಯೋಜನೆಯ ಬಗ್ಗೆ ಕುಮಾರಸ್ವಾಮಿ ವ್ಯಕ್ತಪಡಿಸಿರುವ ಟೀಕೆಗೆ ತಿರುಗೇಟು ನೀಡಿದರು.
“ಅವರು ಮಾಡಿದ ಯೋಜನೆಯನ್ನೇ ನಾವು ಮುಂದುವರಿಸುತ್ತಿದ್ದೇವೆ. ನಾನು ರೈತರ ಬಳಿ ನೇರವಾಗಿ ಹೋಗಿ ಮಾತನಾಡುತ್ತೇನೆ. ರೈತರು ನನಗೆ ಎರಡೇಟು ಹೊಡೆಯಬಹುದು, ಬಟ್ಟೆ ಹರಿಯಬಹುದು, ಕಲ್ಲೆಸೆಯಬಹುದು. ಅದಕ್ಕೆ ಹೆದರಿಕೊಳ್ಳುವುದಿಲ್ಲ. 20 ವರ್ಷಗಳ ನಂತರ ಬಿಡದಿ ಮತ್ತು ಬೆಂಗಳೂರು ದಕ್ಷಿಣದ ಜನರು ನನ್ನ ಕೆಲಸವನ್ನು ನೆನಪಿಸಿಕೊಳ್ಳುತ್ತಾರೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಕುಮಾರಸ್ವಾಮಿ ಅವರೇ ಭೂಮಿಯನ್ನು ಡಿನೋಟಿಫೈ ಮಾಡಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ ಅವರು, “ಅವರು ಡಿನೋಟಿಫೈ ಮಾಡಿ ಎಷ್ಟು ಅನುಭವಿಸುತ್ತಿದ್ದಾರೆ ಎಂದು ಅವರಿಗೆ ಗೊತ್ತು. ಯಡಿಯೂರಪ್ಪ ಅವರಿಗೂ, ನನಗೂ ಗೊತ್ತಿದೆ. ನಾನು ಡಿನೋಟಿಫೈ ಮಾಡಲು ತಯಾರಿಲ್ಲ” ಎಂದು ತಿರುಗೇಟು ನೀಡಿದರು.
ಬೆಲೆ ಏರಿಕೆಗೆ ಮೋದಿ ಕೊಡುಗೆ ಎಂದ ಟೀಕೆ
ಬೆಲೆ ಏರಿಕೆಯ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಬೆಲೆ ಏರಿಕೆ ಮೋದಿ ಅವರ ಕೊಡುಗೆ. ಅವರು ಅಂತರರಾಷ್ಟ್ರೀಯ ಬಿಕ್ಕಟ್ಟು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಪೆಟ್ರೋಲ್ ಬಳಸಬೇಡಿ, ಚಿನ್ನ ಖರೀದಿ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಇದು ಸಾಮಾನ್ಯ ಜನರಿಗೆ ಸಾಧ್ಯವೇ?” ಎಂದು ಪ್ರಶ್ನಿಸಿದರು.
ಕೇರಳ, ತಮಿಳುನಾಡು ಸಿಎಂಗಳಿಗೆ ಶುಭಾಶಯ
ಕೇರಳದ ನೂತನ ಮುಖ್ಯಮಂತ್ರಿ ಸತೀಶನ್ ಅವರಿಗೆ ಮನಃಪೂರ್ವಕ ಶುಭಾಶಯ ಕೋರಿದ ಅವರು, ಪಕ್ಷದ ಹೈಕಮಾಂಡ್ ನೀಡಿದ ಅವಕಾಶಕ್ಕೆ ಅಭಿನಂದಿಸಿದರು. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೂ ಶುಭಾಶಯ ತಿಳಿಸಿದ್ದಾರೆ ಎಂದು ತಿಳಿಸಿದರು.
ಭೂಮಿ ಗ್ಯಾರಂಟಿ ಯೋಜನೆಯ ಬಗ್ಗೆ
“ಜನಸಾಮಾನ್ಯರ ಆಸ್ತಿಗಳಿಗೆ ಸರಿಯಾದ ದಾಖಲೆಗಳನ್ನು ನೀಡುವ ಆರನೇ ಗ್ಯಾರಂಟಿ ‘ಭೂಮಿ ಗ್ಯಾರಂಟಿ’ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಜನರ ಮನೆ ಬಾಗಿಲಿಗೆ ಇ-ಖಾತೆ ತಲುಪಿಸುತ್ತಿದ್ದೇವೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಬ್ಯಾನರ್‌ಗಳ ಬಗ್ಗೆ
ಬೆಂಗಳೂರಿನಲ್ಲಿ ಹಾಕಿರುವ ಬ್ಯಾನರ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಬ್ಯಾನರ್ ಹಾಕಬೇಡಿ ಎಂದು ನಾನೇ ಹೇಳಿದ್ದೆ. ಅಭಿಮಾನಿಗಳು ಹಾಕಿದ್ದಾರೆ. ನಾನೇ ಹಲವು ಬ್ಯಾನರ್‌ಗಳನ್ನು ತೆಗಿಸಿದ್ದೇನೆ. ಸುಮಾರು 50% ಬ್ಯಾನರ್‌ಗಳು ತೆರವುಗೊಂಡಿವೆ. ಕಾರ್ಪೊರೇಷನ್‌ಗೂ ತೆಗೆಯುವಂತೆ ಸೂಚಿಸಿದ್ದೇನೆ” ಎಂದರು.
ಹುಟ್ಟುಹಬ್ಬದ ಸಂಭ್ರಮಾಚರಣೆ ಬೇಡ ಎಂದಿದ್ದರೂ ಅಭಿಮಾನಿಗಳ ಪ್ರೀತಿಗೆ ನಿರಾಕರಿಸಲು ಸಾಧ್ಯವಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.












