ಬೆಂಗಳೂರು/ಮಂಡ್ಯ, ಏಪ್ರಿಲ್ 8:
ಗ್ಯಾರಂಟಿಗಳ ಜಾರಿಗಾಗಿ ಹಣವನ್ನು ಸಂಗ್ರಹಿಸಲು ಕಾಂಗ್ರೆಸ್ ಸರ್ಕಾರ ಜನರ ಮೇಲೇ 60-70 ಸಾವಿರ ಕೋಟಿ ರೂಪಾಯಿ ತೆರಿಗೆ ವಿಧಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಚುನಾವಣೆ ಮುನ್ನ ಗ್ಯಾರಂಟಿಗಳ ಹಣವನ್ನು ಬಿಡುಗಡೆ ಮಾಡಿ ಜನರಿಗೆ ಆಮಿಷ ನೀಡುತ್ತಿದೆ ಎಂದು ಆರೋಪಿಸಿದರು. ಹಾಲು, ಮದ್ಯ, ಬಸ್ ಟಿಕೆಟ್, ಆಸ್ಪತ್ರೆಗಳ ಶುಲ್ಕ ಮತ್ತಿತರ ಮಾರ್ಗಸೂಚಿ ದರಗಳನ್ನು ಸೇರಿಸಿದಾಗ ಸುಮಾರು 60-70 ಸಾವಿರ ಕೋಟಿ ರೂ. ತೆರಿಗೆ ಜನರ ಮೇಲೆ ಹಾಕಲಾಗಿದೆ. ಇದರಿಂದ ಗ್ಯಾರಂಟಿಗಳಿಗೆ ಬೇಕಾದ 65 ಸಾವಿರ ಕೋಟಿ ರೂಪಾಯಿಯನ್ನು ಸರಕಾರ ಸಂಗ್ರಹಿಸುತ್ತಿದೆ ಎಂದು ತಿಳಿಸಿದರು.
“ಇದರಿಂದ ಜನರಿಗೆ ಏನು ಲಾಭವಾಗಿದೆ?” ಎಂದು ಪ್ರಶ್ನೆ ಮಾಡಿದ ಅಶೋಕ, “ರಾಜ್ಯ ಸರ್ಕಾರ ವೈದ್ಯರಿಗೆ ಮತ್ತು ಸರ್ಕಾರಿ ನೌಕರರಿಗೆ ವೇತನ ನೀಡಲು ಹಣವಿಲ್ಲ. ಇದು ದಿವಾಳಿ ಸರ್ಕಾರ ಎಂಬುದನ್ನು ಸಿದ್ಧಪಡಿಸುತ್ತದೆ. ಒಂದೇ ವರ್ಷದಲ್ಲಿ 1 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಡುಗೆ ಅನಿಲದ ಬೆಲೆ ಏರಿಕೆಗೆ ಪ್ರತಿಕ್ರಿಯೆ ನೀಡಿದ ಅವರು, “ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಹೆಚ್ಚಿನ ಸಹಾಯಧನ ನೀಡುತ್ತಿದೆ. ದೆಹಲಿಯಲ್ಲಿ ಪ್ರತಿಭಟನೆ ಮಾಡುವ ಬದಲು ಸಿದ್ದರಾಮಯ್ಯನವರು ಇಡೀ ದೇಶದಲ್ಲಿ ಅನಿಲದ ಬೆಲೆ ಏರಿಕೆಯಾಗಿರುವುದನ್ನು ಅರಿಯಬೇಕು” ಎಂದರು.
ಜೆಡಿಎಸ್ ನಾಯಕರ ವಿರುದ್ಧ ಸೇಡಿನ ರಾಜಕಾರಣ
ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ನಡೆಯುತ್ತಿರುವ ತನಿಖೆ ಕಾಂಗ್ರೆಸ್‌ನ ಸೇಡಿನ ರಾಜಕಾರಣದ ಭಾಗವೆಂದು ಟೀಕಿಸಿದ ಅವರು, “ಭೂ ಹಗರಣದ ವಿಚಾರದಲ್ಲಿ ತನಿಖೆ ನಡೆಸುತ್ತಿರುವ ರೀತಿ ಕಾಂಗ್ರೆಸ್‌ನ ದ್ವೇಷ ಸಾಬೀತು ಮಾಡುತ್ತಿದೆ. ನಾವು ಕುಮಾರಸ್ವಾಮಿ ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ” ಎಂದರು.

ಬಿಜೆಪಿ-ಜೆಡಿಎಸ್ ಹೋರಾಟದ ಬಗ್ಗೆ ಚರ್ಚೆ
ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಟ ಮಾಡುವ ಬಗ್ಗೆ ಚರ್ಚೆ ನಡೆಯಬೇಕಿದೆ. ಇದಕ್ಕಾಗಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಮನ್ವಯ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.
“ಮಂಡ್ಯದ ಜನರು ಛತ್ರಿಗಳಲ್ಲ, ಚಕ್ರವರ್ತಿಗಳು”
ಮಂಡ್ಯದಲ್ಲಿ ನಡೆದ ಬಿಜೆಪಿ ಜನಾಕ್ರೋಶ ಸಭೆಯಲ್ಲಿ ಮಾತನಾಡಿದ ಅಶೋಕ, “ಸಿಎಂ ಸಿದ್ದರಾಮಯ್ಯ 14 ಸೈಟು ಲೂಟಿ ಮಾಡಿ ಹಿಂಪಡೆಯಲಾಯಿತು. ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವರು ರಾಜೀನಾಮೆ ನೀಡಿದರು. ಡಿ.ಕೆ. ಶಿವಕುಮಾರ್ ಮಂಡ್ಯದ ಜನರನ್ನು ‘ಛತ್ರಿ’ ಎಂದು ಜರಿದಿದ್ದಾರೆ. ಆದರೆ ಅವರು ಮತ ಕೇಳಿದವರೆ ಆಗಿದ್ದೇ ಮಂಡ್ಯದ ಜನರ ಬಳಿ” ಎಂದರು.
ಮೇಕೆದಾಟು ಯೋಜನೆ, ವಿಶ್ವವಿದ್ಯಾಲಯ ನಿರ್ಮಾಣ ಹಾಗೂ ಹನುಮ ಧ್ವಜದ ಕುರಿತು ಟೀಕೆ
ಮೇಕೆದಾಟು ಯೋಜನೆ ಇನ್ನೂ ಜಾರಿಗೆ ಬರದೇ ವಿಳಂಬವಾಗಿದೆ. ತಮಿಳುನಾಡಿನ ಸಿಎಂ ಸ್ಟಾಲಿನ್‌ಗೆ ಬೆಂಬಲವಿರುವುದರಿಂದಲೇ ಕಾಂಗ್ರೆಸ್ ಈ ಬಗ್ಗೆ ಚುಕ್ಕಾಣಿ ಹಿಡಿಯುತ್ತಿಲ್ಲ. ಮಂಡ್ಯದಲ್ಲಿ ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ ಮೋದಿ ಸರ್ಕಾರ ಅನುದಾನ ನೀಡಿದ್ದರೂ ಕಾಂಗ್ರೆಸ್ ಆ ಯೋಜನೆಯನ್ನು ಸ್ಥಗಿತಗೊಳಿಸಿದೆ. ಹನುಮ ಧ್ವಜ ಹಾರಿಸಲು ಸಹ ಅವಕಾಶ ನೀಡಿಲ್ಲ. ಆದರೆ ಡಿ.ಕೆ.ಶಿವಕುಮಾರ್ ತಾವು ಹಿಂದೂ ಎಂಬುದನ್ನು ಸಾರುತ್ತಿದ್ದಾರೆ ಎಂದು ಅಶೋಕ ಟೀಕಿಸಿದರು.












