ಬೆಂಗಳೂರು: ರಾಜ್ಯದಲ್ಲಿ ಜಾತಿಗಣತಿ ಕುರಿತ ಅಂಕಿ-ಅಂಶಗಳ ಲೀಕ್ ಹಿನ್ನೆಲೆ ತೀವ್ರ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಇದು ಜಾತಿಗಣತಿಯೊ ಅಥವಾ ದ್ವೇಷಗಣತಿಯೊ ಎಂದು ಗಂಭೀರ ಪ್ರಶ್ನೆ ಎಸೆದಿದ್ದಾರೆ.
ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅವರು, ಹಳೇ ಮೈಸೂರು ಜಿಲ್ಲೆಯ ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಸೇರಿದಂತೆ ಇತರ ಜಿಲ್ಲೆಗಳಲ್ಲಿ ವಾಸಿಸುವ ಒಕ್ಕಲಿಗ ಸಮುದಾಯದ ಜನಸಂಖ್ಯೆ ಎಷ್ಟು ಎಂಬುದನ್ನು ಪ್ರಶ್ನಿಸಿದ್ದಾರೆ. ಜೊತೆಗೆ, “ಪೆನ್ನು ಪೇಪರ್ ಕೇಳಿದ್ದ ವ್ಯಕ್ತಿ, ಇಂದು ಸಮಾಜದ ಮರಣಶಾಸನ ಬರೆಯುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.
“ಜಾತಿಗಣತಿಯ ವರದಿ ಎಂಬ ಹೆಸರಿನಲ್ಲಿ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ರಾಜಕೀಯ ಹಾಗೂ ಸಾಮಾಜಿಕ ವೇರಾಭಾವ ಹುಟ್ಟುಹಾಕುವಂತಹ ಷಡ್ಯಂತ್ರ ನಡೆಯುತ್ತಿದೆ” ಎಂದು ಆರೋಪಿಸಿದ ಅವರು, “ಈ ವರದಿ ಗಜಪ್ರಸವ ತಥಂಗ. ಇದಕ್ಕೆ ಸಂಪುಟದ ಶಾಸ್ತ್ರೋಕ್ತ ಮುದ್ರೆ ಹಾಕಲಾಗಿದೆ. ಇದೊಂದು ಸೂಕ್ಷ್ಮವಾಗಿ ರೂಪಿಸಿರುವ ರಾಜಕೀಯ ತಂತ್ರ” ಎಂದು ಹೇಳಿದರು.
ವೀರಶೈವ ಲಿಂಗಾಯತ ಹಾಗೂ ಇತರೆ ಸಮಾಜಗಳ ಸಂಖ್ಯೆಯ ಅಂಕಿ-ಅಂಶಗಳ ವಿಷಯದಲ್ಲಿಯೂ ಆಶ್ಚರ್ಯ ವ್ಯಕ್ತಪಡಿಸಿದ ಅವರು, ಈ ಅಂಶಗಳು ನಿರ್ದಿಷ್ಟ ಗುರಿಯನ್ನು ಹೊಂದಿಕೊಂಡಿರುವಂತೆ ತೋರುತ್ತದೆ ಎಂದು ಅಭಿಪ್ರಾಯಪಟ್ಟರು.
ಡಿಸಿಎಂ ಡಿ.ಕೆ. ಶಿವಕುಮಾರ್ ಮೇಲೆ ತೀಕ್ಷ್ಣ ಟೀಕೆ ನಡೆಸಿದ ಕುಮಾರಸ್ವಾಮಿ, “ಮುಖ್ಯಮಂತ್ರಿ ಕುರ್ಚಿಗೆ ಹವಣಿಸಿರುವವರು ಹಿಂದೆ ಜಾತಿಗಣತಿಗೆ ವಿರೋಧ ವ್ಯಕ್ತಪಡಿಸಿದ್ದರೂ ಈಗ ಸಂಪೂರ್ಣ ಬದಲಾವಣೆ ತೋರಿಸಿದ್ದಾರೆ. ‘ನನಗೂ ಪೆನ್ನೂ ಪೇಪರ್ ಕೊಡಿ’ ಎಂದು ಬೇಡಿದವರು, ಈಗ ಜನಾಂಗದ ಮುಂದೆ ಶಿರಬಾಗಿ ನಿಂತು ಈ ವರದಿಗೆ ಬೆನ್ನು ತಟ್ಟುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
“ಈ ವರದಿಗೆ ನನಗೆ ಯಾವುದೇ ಒಪ್ಪಿಗೆಯಿಲ್ಲ. ಸಮಾಜದ ಮೇಲಿನ ಅನ್ಯಾಯದ ವಿರುದ್ಧ ನಾನು ಸದಾ ಹೋರಾಡಲು ಸಿದ್ಧನಿದ್ದೇನೆ” ಎಂಬ ಎಚ್ಚರಿಕೆಯನ್ನು ಸಹ ಅವರು ಕೊಟ್ಟಿದ್ದಾರೆ.
ಕೇಂದ್ರ ಸಚಿವರ ಈ ತೀವ್ರ ಹೇಳಿಕೆ ಜಾತಿಗಣತಿ ವರದಿಯನ್ನು ಕೊನೆಗೂ ರಾಜಕೀಯ ಚರ್ಚೆಯ ಕೇಂದ್ರಬಿಂದು ಮಾಡಿದೆ.












