ಬೆಂಗಳೂರು: ರಾಜ್ಯದ ಯಾವುದೇ ಜಿಲ್ಲೆಯಲ್ಲಿ ರಸಗೊಬ್ಬರದ ಪೂರೈಕೆಯಲ್ಲಿ ಕೊರತೆ ಇಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ರೈತರು ಆತಂಕಕ್ಕೆ ಒಳಗಾಗಬಾರದು ಮತ್ತು ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ಇತರೆ ಜಿಲ್ಲೆಗಳಿಂದ ರಸಗೊಬ್ಬರವನ್ನು ವರ್ಗಾವಣೆ ಮಾಡಿ ಸರಿದೂಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ವಿಕಾಸ ಸೌಧದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು, ರೈತರಿಗೆ ತೊಂದರೆಯಾಗದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಈ ವರ್ಷ ಮುಂಗಾರು ಬೇಗ ಆರಂಭವಾಗಿ 2 ಲಕ್ಷ ಹೆಕ್ಟೇರ್ ಮುಸಿಕನ ಜೋಳ ಪ್ರದೇಶ ವಿಸ್ತರಣೆಯಾಗಿರುವುದರಿಂದ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಏರಿಕೆಯಾಗಿದೆ. ಕೆಲವು ರೈತರು ಆತಂಕದಿಂದ ಆಗಸ್ಟ್-ಸೆಪ್ಟೆಂಬರ್‌ಗೆ ಬೇಕಾದ ಗೊಬ್ಬರವನ್ನು ಈಗಲೇ ಖರೀದಿಸಲು ಮುಂದಾಗಿರುವುದು ಬೇಡಿಕೆ ಹೆಚ್ಚಿರುವ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಗುರಿಗಿಂತ ಹೆಚ್ಚು ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ಜುಲೈ ಮಾಸದ ಬೇಡಿಕೆ ಪೂರೈಕೆಯ ನಂತರವೂ ಉಳಿಕೆ ಇದೆ. ನಿರ್ಧಿಷ್ಟ ಪ್ರದೇಶಗಳಲ್ಲಿ ಯೂರಿಯಾ ಕೊರತೆ ಕಂಡುಬಂದರೆ, ಉಳಿಕೆ ಇರುವ ಜಿಲ್ಲೆಗಳಿಂದ ಮರುವಿಂಗಡಣೆ ಮಾಡಿ ಸರಬರಾಜು ಮಾಡಲಾಗುವುದು. ರೈತರು ಗೊಂದಲಕ್ಕೆ ಒಳಗಾಗಬಾರದು ಎಂದು ಸಚಿವರು ಮನವಿ ಮಾಡಿದರು.
ಜುಲೈವರೆಗೆ ಕೇಂದ್ರ ಸರ್ಕಾರದಿಂದ 5,34,009 ಮೆ.ಟನ್ ರಸಗೊಬ್ಬರ (ಎಲ್ಲಾ ತರಹ) ಹಂಚಿಕೆಯಾಗಿದ್ದು, ಇದರಲ್ಲಿ 4,30,633 ಮೆ.ಟನ್ ಸರಬರಾಜಾಗಿದೆ. ಏಪ್ರಿಲ್‌ನಿಂದ ಜುಲೈವರೆಗೆ 6,80,655 ಮೆ.ಟನ್ ಯೂರಿಯಾ ಬೇಡಿಕೆ ಇದ್ದರೂ, 6,82,500 ಮೆ.ಟನ್ ಹಂಚಿಕೆಯಾಗಿ, 5,26,817 ಮೆ.ಟನ್ ಸರಬರಾಜಾಗಿದೆ. 3,46,499 ಮೆ.ಟನ್ ಯೂರಿಯಾ ದಾಸ್ತಾನು ಉಳಿಕೆಯಿದ್ದು, ಒಟ್ಟು 8,73,315 ಮೆ.ಟನ್ ಲಭ್ಯತೆಯಲ್ಲಿ 7,08,859 ಮೆ.ಟನ್ ವಿತರಿಸಲಾಗಿದ್ದು, 1,64,456 ಮೆ.ಟನ್ ಉಳಿದಿದೆ. ಕೇಂದ್ರದಿಂದ ಹಂತಹಂತವಾಗಿ ಪೂರೈಕೆಯಾಗುವ ರಸಗೊಬ್ಬರವನ್ನು ತಕ್ಷಣ ವರ್ಗಾವಣೆ ಮಾಡಲಾಗುವುದು.
ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಂಪರ್ಕದಲ್ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಯೂರಿಯಾ ಶೀಘ್ರ ಪೂರೈಕೆಗಾಗಿ ಪತ್ರ ಬರೆದಿದ್ದಾರೆ. ಅಧಿಕಾರಿಗಳ ತಂಡ ಸಮಸ್ಯೆ ಇಲ್ಲದಂತೆ ಪರಿಹರಿಸಲಿದೆ ಎಂದು ಸಚಿವರು ತಿಳಿಸಿದರು.
ನ್ಯಾನೋ ಯೂರಿಯಾ ಪರಿಣಾಮಕಾರಿ ಎಂದು ಕೃಷಿ ಇಲಾಖೆ ಮತ್ತು ವಿಶ್ವವಿದ್ಯಾಲಯಗಳ ಪ್ರಯೋಗ ಸಾಬೀತುಪಡಿಸಿದ್ದು, ಇದರಿಂದ ಉಳಿತಾಯವೂ ಆಗುತ್ತದೆ. ರೈತರು ಇದನ್ನು ಬಳಸಬೇಕೆಂದು ಸಲಹೆ ನೀಡಿದರು. ಅತಿಯಾದ ರಸಗೊಬ್ಬರ ಬಳಕೆಯು ಭೂಮಿ ಫಲವತ್ತತೆ ಮತ್ತು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ಹೀಗಾಗಿ ಜೈವಿಕ ಮತ್ತು ಹಸಿರು ಗೊಬ್ಬರ ಬಳಕೆಯನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ರಾಜ್ಯಾದ್ಯಂತ ಉತ್ತಮ ಮಳೆಯಾಗಿ, ಶೇಕಡಾ 75ರಷ್ಟು ಬಿತ್ತನೆ ಮುಗಿದಿದ್ದು, ಶೇಕಡಾ 100ರಷ್ಟು ಗುರಿ ಸಾಧನೆ ಆಗುವ ನಿರೀಕ್ಷೆ ಇದೆ ಎಂದು ಸಚಿವರು ವಿವರಿಸಿದರು.












