ಮಧುಗಿರಿ (ತುಮಕೂರು ಜಿಲ್ಲೆ): ಸಾರಿಗೆ ಹಾಗೂ ಮುಜರಾಯಿ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಅವರು ಸೋಮವಾರ ಮಧುಗಿರಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ನೂತನ ಕಚೇರಿ ಕಟ್ಟಡ ಹಾಗೂ ಸ್ವಯಂಚಾಲಿತ ವಾಹನ ಚಾಲನಾ ಪರೀಕ್ಷಾ ಪಥದ ಶಂಕುಸ್ಥಾಪನೆ ನೆರವೇರಿಸಿದರು.
3.14 ಎಕರೆ ಪ್ರದೇಶದಲ್ಲಿ ಒಟ್ಟು ರೂ. 11.50 ಕೋಟಿ ವೆಚ್ಚದಲ್ಲಿ ಈ ಯೋಜನೆಗಳು ಕೈಗೊಳ್ಳಲಾಗುತ್ತಿದೆ. ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, “ದೇಶದಲ್ಲೇ ಅತ್ಯಧಿಕ ಸಂಖ್ಯೆಯ ಸ್ವಯಂಚಾಲಿತ ಚಾಲನಾ ಪರೀಕ್ಷಾ ಟ್ರ್ಯಾಕ್‌ಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಈಗಾಗಲೇ ರಾಜ್ಯದಲ್ಲಿ 7 ಟ್ರ್ಯಾಕ್‌ಗಳು ಕಾರ್ಯಾರಂಭ ಮಾಡಿವೆ. ಈ ವರ್ಷದೊಳಗೆ ಇನ್ನೂ 10 ಟ್ರ್ಯಾಕ್‌ಗಳು ಪ್ರಾರಂಭವಾಗಲಿವೆ ಮತ್ತು 28 ಟ್ರ್ಯಾಕ್‌ಗಳ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಒಟ್ಟಾರೆಯಾಗಿ 45 ಸ್ವಯಂಚಾಲಿತ ಟ್ರ್ಯಾಕ್‌ಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸಲಿವೆ” ಎಂದು ತಿಳಿಸಿದರು.
ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥದ ಬಗ್ಗೆ ಮಾತನಾಡಿದ ಅವರು, “ಈ ವ್ಯವಸ್ಥೆಯಿಂದ ಯಾವುದೇ ಮಾನವ ಹಸ್ತಕ್ಷೇಪ ಅಥವಾ ಬಾಹ್ಯ ಒತ್ತಡವಿಲ್ಲದೇ ಪಾರದರ್ಶಕವಾಗಿ ಪರೀಕ್ಷೆ ನಡೆಯಲಿದೆ. ಉತ್ತಮ ಕೌಶಲ್ಯವುಳ್ಳ ಚಾಲಕರು ಮಾತ್ರ ಪಾಸಾಗಲಿದ್ದಾರೆ. ಇದರಿಂದ ರಸ್ತೆ ಅಪಘಾತಗಳನ್ನು ಗಣನೀಯವಾಗಿ ತಡೆಗಟ್ಟಲು ಸಾಧ್ಯವಾಗಲಿದೆ” ಎಂದು ಹೇಳಿದರು.
ಮಧುಗಿರಿ ಸಾರಿಗೆ ಬಸ್ ನಿಲ್ದಾಣದ ನವೀಕರಣಕ್ಕೆ ಆದ್ಯತೆ ನೀಡಲಾಗುವುದು ಹಾಗೂ ತಾಲ್ಲೂಕಿಗೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದೂ ಸಚಿವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಧುಗಿರಿ ಶಾಸಕ ಶ್ರೀ ಕೆ.ಎನ್. ರಾಜಣ್ಣ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಕ್ರಂ ಪಾಷ ಭಾಆಸೇ, ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಶ್ರೀಮತಿ ಓಂಕಾರೇಶ್ವರಿ, ಜಂಟಿ ಸಾರಿಗೆ ಆಯುಕ್ತೆ ಶ್ರೀಮತಿ ಗಾಯತ್ರಿದೇವಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀ ಎ.ವಿ. ಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.












