ಬೆಂಗಳೂರು, ಡಿಸೆಂಬರ್ 29: ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಸರ್ಕಾರ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹೆಬ್ಬಾಳ ಫ್ಲೈಓವರ್ ಬಳಿ ಡ್ರಗ್ಸ್ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿ, ಅಲ್ಲಿನ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸದ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.
“ಹೆಬ್ಬಾಳ ಫ್ಲೈಓವರ್ ಬಳಿ ಡ್ರಗ್ಸ್ ವ್ಯಾಪಾರ ನಡೆಯುತ್ತಿದೆ. ಅವರಿಗೆ ರೇಷನ್ ಕಾರ್ಡ್, ವೋಟರ್ ಐಡಿ ಇದೆ. ಇದೆಲ್ಲವನ್ನು ಕಾಂಗ್ರೆಸ್ ಸರ್ಕಾರ ಮಾಡಿಕೊಟ್ಟಿದೆ. ಕಾಂಗ್ರೆಸ್‌ನಲ್ಲಿರುವ ದಲಿತ ನಾಯಕರಿಗೆ ನರ ಸತ್ತಿದೆಯಾ? ಮುಸ್ಲಿಂ ನಾಯಕರು ತಮ್ಮ ಸಮುದಾಯದವರಿಗೆ ಮನೆ ಕಟ್ಟಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಆದರೆ ದಲಿತರ ವಿಚಾರ ಬಂದಾಗ ಯಾವ ದಲಿತ ನಾಯಕ ಕೇಳಿದ್ದಾರಾ?” ಎಂದು ಪ್ರಶ್ನಿಸಿದ್ದಾರೆ.
ಕಾಡಗೋಡಿ ಬಳಿ ದಲಿತರ ಮನೆಗಳನ್ನು ಒಡೆದಾಗ ಯಾವ ದಲಿತ ನಾಯಕ ಅಲ್ಲಿಗೆ ಹೋಗಿಲ್ಲ ಎಂದು ಆರೋಪಿಸಿದ ಅವರು, “ಮುಸ್ಲಿಂ ಪ್ರದೇಶದಲ್ಲಿ ದಲಿತರಿಗೆ ಮನೆ ಮಾಡಿಕೊಡುತ್ತಾರೆ, ಅಲ್ಲಿ ಅಂಬೇಡ್ಕರ್ ಫೋಟೋ ಹಾಕಿ ರಕ್ಷಣೆ ನೀಡುತ್ತಾರೆ. ಅಂಬೇಡ್ಕರ್ ಅವರನ್ನು ಬಿಟ್ಟು ಬಿದ್ದಿದ್ದೀರಾ?” ಎಂದು ಕಾಂಗ್ರೆಸ್‌ನ ದಲಿತ ನಾಯಕರನ್ನು ಪ್ರಶ್ನಿಸಿದ್ದಾರೆ.
ಸರ್ಕಾರದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿರುವ ಛಲವಾದಿ ನಾರಾಯಣಸ್ವಾಮಿ ಅವರು, “ಗಂಧದ ಬೀಡಿನ ಕರ್ನಾಟಕ ಈಗ ಗಾಂಜಾ ಬೀಡು” ಎಂಬ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸರ್ಕಾರವನ್ನು ಬಿಟ್ಟುಕೊಡಿ, ಜಿಪಿಎ ಮಾಡಿಕೊಟ್ಟು ಕಮೀಷನ್ ಪಡೆಯಿರಿ, ರಾಜ್ಯ ಹಾಳು ಮಾಡಿ ಮನೆಯಲ್ಲಿ ಕೂರಿ ಎಂದು ವ್ಯಂಗ್ಯವಾಡಿದ್ದಾರೆ.












