ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜನವರಿ 2ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರದ ವಿಕಸಿತ್ ಭಾರತ್ – ಗ್ಯಾರಂಟಿ ಫಾರ್ ರೋಜ್ಗಾರ್ & ಆಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆ 2025 (VB-G RAM G) ಅನ್ನು ತೀವ್ರವಾಗಿ ಖಂಡಿಸಲಾಗಿದೆ. ಈ ಕಾಯ್ದೆಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA)ಯನ್ನು ರದ್ದುಗೊಳಿಸಿ, ಅಧಿಕಾರ ವಿಕೇಂದ್ರೀಕರಣ ಮತ್ತು ಗ್ರಾಮಪಂಚಾಯತ್‌ಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ ಎಂದು ಸಂಪುಟ ಆರೋಪಿಸಿದೆ.
ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದಂತೆ, ಈ ಕ್ರಮವು ಸ್ವರಾಜ್ಯದ ಪರಿಕಲ್ಪನೆಯನ್ನು ಬುಡಮೇಲು ಮಾಡುವ ಪ್ರಯತ್ನವಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ನಾಳೆ ವಿವರವಾದ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಲೋಕಾಯುಕ್ತ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ
ಸಭೆಯಲ್ಲಿ “ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ, 2025″ಕ್ಕೆ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಲೋಕಾಯುಕ್ತರ ವೇತನ ಮತ್ತು ಪಿಂಚಣಿ ಸಂಬಂಧಿತ ನಿಬಂಧನೆಗಳು ಸುಧಾರಣೆಗೊಳ್ಳಲಿವೆ.
ಆರೋಗ್ಯ ಅಭಿಯಾನಕ್ಕೆ 41.80 ಕೋಟಿ ರೂ. ಅನುದಾನ
2025-26ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ ವಿವಿಧ ಐಇಸಿ ಮತ್ತು ಎಸ್‌ಬಿಸಿ ಕಾರ್ಯಕ್ರಮಗಳಿಗೆ ರೂ. 41.80 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಗೋಕಾಕದಲ್ಲಿ ಹೊಸ ಆಸ್ಪತ್ರೆ ನಿರ್ಮಾಣ
ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನಲ್ಲಿ 100 ಹಾಸಿಗೆಗಳ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯನ್ನು ರೂ. 40 ಕೋಟಿ ವೆಚ್ಚದಲ್ಲಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ.
ಬೆಂಗಳೂರು ಉಪನಗರ ಸಾರಿಗೆ ಯೋಜನೆಗೆ ಪರಿಷ್ಕೃತ ಅನುಮೋದನೆ
ಬೆಂಗಳೂರು ಉಪನಗರ ಸಾರಿಗೆ ಯೋಜನೆಯ (BSTP) ಕಾರಿಡಾರ್ 2 ಮತ್ತು 4ರ ಪರಿಷ್ಕೃತ ವೆಚ್ಚ ರೂ. 16,876 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಆರು DIET ಸಂಸ್ಥೆಗಳ ಉನ್ನತೀಕರಣ
ಬೀದರ್, ಬಳ್ಳಾರಿ, ಚಿತ್ರದುರ್ಗ, ಮೈಸೂರು, ಶಿವಮೊಗ್ಗ ಮತ್ತು ಮಂಡ್ಯ ಜಿಲ್ಲೆಗಳ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು (DIET) ಉತ್ಕೃಷ್ಟ ಸಂಸ್ಥೆಗಳನ್ನಾಗಿ ಪರಿವರ್ತಿಸಲು ರೂ. 36.90 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ.
ಶಾಲೆಗಳಲ್ಲಿ ಸಮುದಾಯ ಸಾಮಾಜಿಕ ಹೊಣೆಗಾರಿಕೆ ನೀತಿ
ಸರ್ಕಾರಿ ಶಾಲೆಗಳಲ್ಲಿ ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CCSR) ನೀತಿಗೆ ಸಂಪುಟ ಅನುಮೋದನೆ ನೀಡಿದೆ.
ಯಲಹಂಕದಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಬೆಂಗಳೂರಿನ ಯಲಹಂಕ ಬಳಿ 153 ಎಕರೆ ಪ್ರದೇಶದಲ್ಲಿ “ವಿಶ್ವಗುರು ಬಸವಣ್ಣ ಜೀವ ವೈವಿಧ್ಯ ಬೃಹತ್ ಉದ್ಯಾನವನ”ವನ್ನು ರೂ. 50.29 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ.
ಅಜೀಮ್ ಪ್ರೇಮ್‌ಜಿ ಫೌಂಡೇಷನ್‌ಗೆ ಜಮೀನು ಗುತ್ತಿಗೆ
ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ (IGOT) ಸಂಸ್ಥೆಗೆ 10 ಎಕರೆ ಜಮೀನನ್ನು 99 ವರ್ಷಗಳ ಗುತ್ತಿಗೆಯಲ್ಲಿ ಅಜೀಮ್ ಪ್ರೇಮ್‌ಜಿ ಫೌಂಡೇಷನ್‌ಗೆ ನೀಡಲು ಮತ್ತು MoU ಮಾಡಿಕೊಳ್ಳಲು ಅನುಮೋದನೆ.
ಕಾಂಗ್ರೆಸ್ ಭವನಕ್ಕೆ ಜಮೀನು ಮಂಜೂರು
6 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ನಾಗರಿಕ ಸೌಲಭ್ಯ ನಿವೇಶನಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕಛೇರಿ ಕಟ್ಟಡ ನಿರ್ಮಾಣಕ್ಕಾಗಿ ಗುತ್ತಿಗೆಯಲ್ಲಿ ಮಂಜೂರು ಮಾಡಲು ನಿರ್ಧಾರ.
ಕಲಬುರಗಿಯಲ್ಲಿ ಶಿಕ್ಷಕರ ಭವನಕ್ಕೆ ಭೂಮಿ
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಸರ್ವೇ ನಂ. 111/2ರ 2338.91 ಚ.ಮೀ. ಭೂಮಿಯನ್ನು ಶಿಕ್ಷಕರ ಭವನ ನಿರ್ಮಾಣಕ್ಕಾಗಿ ರಿಯಾಯಿತಿ ದರದಲ್ಲಿ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘಕ್ಕೆ ಹಂಚಿಕೆಗೆ ಅನುಮೋದನೆ.
ಶಾಲಾ ಪೀಠೋಪಕರಣಗಳ ಖರೀದಿ
2025-26ಕ್ಕೆ ಸರ್ಕಾರಿ ಶಾಲೆಗಳಿಗೆ 41,685 ಪೀಠೋಪಕರಣಗಳನ್ನು ರೂ. 35.32 ಕೋಟಿ ವೆಚ್ಚದಲ್ಲಿ ಖರೀದಿಸಲು ಅನುಮೋದನೆ.
ಪಶುವೈದ್ಯಕೀಯ ಸಂಸ್ಥೆಗಳ ಕಟ್ಟಡ ನಿರ್ಮಾಣ
100 ಪಶುವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳಿಗೆ ರೂ. 50 ಕೋಟಿ ನಬಾರ್ಡ್ ಅನುದಾನದೊಂದಿಗೆ ಅನುಮೋದನೆ.
GST ಅನಲಿಟಿಕ್ಸ್ ಪೋರ್ಟಲ್ ಅಭಿವೃದ್ಧಿ
ಐಐಟಿ ಹೈದರಾಬಾದ್ ಸಹಯೋಗದೊಂದಿಗೆ ಕರ್ನಾಟಕ GST ಅನಲಿಟಿಕ್ಸ್ ಪೋರ್ಟಲ್ ಅನ್ನು ರೂ. 19 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ.
ಜ್ಞಾನ ಭಂಡಾರ ಡಿಜಿಟಲೈಸೇಷನ್ ವಿಧೇಯಕಕ್ಕೆ ಒಪ್ಪಿಗೆ
“The Karnataka Jnana Bhandar Manuscripts and Digitalisation Bill, 2025″ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೈಸೇಷನ್ ಸುಗಮಗೊಳ್ಳಲಿದೆ.












