ಬೆಂಗಳೂರು: ಕೇಂದ್ರ ಸರಕಾರದ ಯೋಜನೆಗಳ ಕುರಿತು ತಪ್ಪು ಮಾಹಿತಿ ನೀಡಿ ಜನರಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ. ಗೋಲ್ಡ್ ಫಿಂಚ್ ಹೊಟೇಲ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಗೊಳಿಸಲಾಗಿರುವ ವಿಬಿ ಜಿ ರಾಮ್ ಜಿ ಯೋಜನೆಯನ್ನು ಟೀಕಿಸಿ ಕಾಂಗ್ರೆಸ್ ನಾಯಕರು ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
“ಪ್ರಧಾನಿ ಮೋದಿ ಅವರು ವಿಬಿ ಜಿ ರಾಮ್ ಜಿ ಯೋಜನೆಯ ಮೂಲಕ ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆ ಮಾಡಿ ಗ್ರಾಮೀಣ ಅಭಿವೃದ್ಧಿಯ ಕನಸು ನನಸಾಗಿಸಲು ಮುಂದಾಗಿದ್ದಾರೆ. ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಆಶಯವನ್ನು ಸಾಕಾರಗೊಳಿಸಲು ಈ ಯೋಜನೆಗೆ ಏಳು-ಎಂಟು ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಹತ್ತಾರು ವರ್ಷಗಳ ಆಡಳಿತದಲ್ಲಿ ಸ್ಕೀಂಗಳ ಬಗ್ಗೆ ಯೋಚಿಸದೇ ಸ್ಕ್ಯಾಮ್‌ಗಳ (ಹಗರಣಗಳ) ಬಗ್ಗೆಯೇ ಗಮನ ಹರಿಸಿತ್ತು” ಎಂದು ವಿಜಯೇಂದ್ರ ಅವರು ಹೇಳಿದರು.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಯ ಬಗ್ಗೆ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ ಅವರು, “ಕಾಂಗ್ರೆಸ್ ಪಕ್ಷ ಎಂದಿಗೂ ಮಹಾತ್ಮ ಗಾಂಧೀಜಿ ಅಥವಾ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಗೌರವಿಸಿಲ್ಲ. ಈಗಲೂ ಅದೇ ಮುಂದುವರಿದಿದೆ” ಎಂದರು. ಯೋಜನೆಯ ಮೂಲಕ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದ ಅವರು, ಕೆಲಸದ ದಿನಗಳನ್ನು 100ರಿಂದ 125ಕ್ಕೆ ಏರಿಸಲಾಗಿದೆ ಮತ್ತು ಕೃಷಿ ಸಮಯದಲ್ಲಿ ರೈತರಿಗೆ ಅನಾನುಕೂಲವಾಗದಂತೆ ಯೋಜನೆಯನ್ನು ನಿಲ್ಲಿಸಲಾಗುತ್ತದೆ ಎಂದು ಹೇಳಿದರು.
“ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೀರ್ಮಾನಗಳು ಹಿಂದಿನಂತೆಯೇ ಇರಲಿವೆ. ಕೇಂದ್ರ ಸರಕಾರ ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ಕಸಿದುಕೊಳ್ಳುತ್ತಿಲ್ಲ” ಎಂದು ಸ್ಪಷ್ಟಪಡಿಸಿದ ವಿಜಯೇಂದ್ರ ಅವರು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಾಂಗ್ರೆಸ್‌ನ ಸುಳ್ಳು ಪ್ರಚಾರಕ್ಕೆ ಅವಕಾಶ ನೀಡದೇ ಗ್ರಾಮ ಮಟ್ಟದಲ್ಲಿ ಜನರಿಗೆ ಮನವರಿಕೆ ಮಾಡಿಕೊಡಲಿವೆ ಎಂದರು. ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವುದು ಸರಕಾರದ ಗುರಿ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ನಡೆದ ಹಗರಣಗಳನ್ನು ಉಲ್ಲೇಖಿಸಿದ ಅವರು, “ಯುಪಿಎ ಸರಕಾರದ ಅವಧಿಯಲ್ಲಿ 2ಜಿ ಸ್ಕ್ಯಾಮ್, ಕಲ್ಲಿದ್ದಲು ಹಗರಣ ಮುಂತಾದವುಗಳಿಂದ ದೇಶ ಅಭಿವೃದ್ಧಿ ಹೊಂದಲಿಲ್ಲ. ಆದರೆ, ಕಳೆದ 10 ವರ್ಷಗಳಲ್ಲಿ ಮೋದಿ ನೇತೃತ್ವದಲ್ಲಿ ನಾವು ಮಾಡಿದ ಸಾಧನೆಗಳನ್ನು ಸದನದಲ್ಲಿ ಚರ್ಚಿಸಲು ಸಿದ್ಧರಿದ್ದೇವೆ” ಎಂದು ಸವಾಲು ಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆ ಕುರಿತು ವಿಶೇಷ ಅಧಿವೇಶನ ಕರೆಯಿರುವುದನ್ನು ಸ್ವಾಗತಿಸಿದ ಅವರು, ಮನ್‌ರೇಗಾ ಯೋಜನೆಯಲ್ಲಿ ಕಾಂಗ್ರೆಸ್ ಏನು ಮಾಡಿತ್ತು ಎಂಬುದನ್ನು ಚರ್ಚಿಸೋಣ ಎಂದರು.

ಇದಲ್ಲದೇ, ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸದೇ ಇರುವುದನ್ನು ಟೀಕಿಸಿದ ವಿಜಯೇಂದ್ರ ಅವರು, ಸಿದ್ದರಾಮಯ್ಯ ಅವರು ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿಗೊಳಿಸುವುದಾಗಿ ಹೇಳಿದ್ದರೂ ಇದುವರೆಗೆ ಏನೂ ಆಗಿಲ್ಲ ಎಂದರು. ಕಾಂಗ್ರೆಸ್ ಪಕ್ಷಕ್ಕೆ ಮೋದಿ ಅವರ ಜನಪ್ರಿಯತೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಹತಾಶೆಯಲ್ಲಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಭಾಗವಹಿಸಿದ್ದರು. ವಿಜಯೇಂದ್ರ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಸಂಕ್ರಾಂತಿ ಶುಭಾಶಯಗಳನ್ನು ಕೋರಿದರು.












