ಬೆಂಗಳೂರು: ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯವು ಗಣರಾಜ್ಯೋತ್ಸವ ಶಿಬಿರ-2026 (ಆರ್‌ಡಿಸಿ-2026)ನಲ್ಲಿ ಸತತ ಎರಡನೇ ಬಾರಿಗೆ ಪ್ರತಿಷ್ಠಿತ ಪ್ರಧಾನಮಂತ್ರಿಗಳ ಬ್ಯಾನರ್ ಮತ್ತು ಟ್ರೋಫಿಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ದೇಶದಾದ್ಯಂತದ 17 ನಿರ್ದೇಶನಾಲಯಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಒಟ್ಟಾರೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಭಾರತದ ಎನ್‌ಸಿಸಿ ಚರಿತ್ರೆಯಲ್ಲಿ ಗಮನಾರ್ಹ ಸಾಧನೆಯಾಗಿದೆ.
ನವದೆಹಲಿಯಲ್ಲಿ ನಡೆದ ಈ ತಿಂಗಳಾವಧಿಯ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಕ್ಯಾಡೆಟ್‌ಗಳು ಪಥಸಂಚಲನ, ಫೈರಿಂಗ್, ಸಾಂಸ್ಕೃತಿಕ ಸ್ಪರ್ಧೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಿದರು. ಇದರಿಂದಾಗಿ ಇತರ 16 ನಿರ್ದೇಶನಾಲಯಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು.
ರಕ್ಷಣಾ ಸಚಿವಾಲಯದ ಮಾಹಿತಿಯಂತೆ, ಪ್ರಧಾನಮಂತ್ರಿಗಳ ಬ್ಯಾನರ್ ಮತ್ತು ಟ್ರೋಫಿಯನ್ನು ವರ್ಷವಿಡೀ ಎನ್‌ಸಿಸಿ ಚಟುವಟಿಕೆಗಳಲ್ಲಿ ಸ್ಥಿರವಾದ ಉನ್ನತ ಪ್ರದರ್ಶನ ನೀಡುವ ನಿರ್ದೇಶನಾಲಯಕ್ಕೆ ನೀಡಲಾಗುತ್ತದೆ. ಮೌಲ್ಯಮಾಪನದಲ್ಲಿ ಸಂಘಟಿತ ಶಿಬಿರಗಳು, ಸ್ಪರ್ಧೆಗಳಲ್ಲಿ ಶಿಸ್ತು, ಎನ್‌ಸಿಸಿ ಪ್ರಮಾಣಪತ್ರ ಪರೀಕ್ಷೆಗಳ ಫಲಿತಾಂಶಗಳು ಮತ್ತು ಸಶಸ್ತ್ರ ಪಡೆಗಳಿಗೆ ಸೇರ್ಪಡೆಯಾದ ಕ್ಯಾಡೆಟ್‌ಗಳ ಸಂಖ್ಯೆಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ.
ಈ ನಿರ್ದೇಶನಾಲಯವು ಇತ್ತೀಚಿನ ವರ್ಷಗಳಲ್ಲಿ ಅಂತರ ನಿರ್ದೇಶನಾಲಯ ಶೂಟಿಂಗ್ ಚಾಂಪಿಯನ್‌ಶಿಪ್, ಅಖಿಲ ಭಾರತ ವಾಯುಸೈನಿಕ ಶಿಬಿರ, ಅಖಿಲ ಭಾರತ ನೌಕಾ ಸೈನಿಕ ಶಿಬಿರ, ಐಡಿಯಾ ಮತ್ತು ಇನೋವೇಷನ್ ಸ್ಪರ್ಧೆಗಳು ಹಾಗೂ ಆರ್‌ಡಿಸಿ ಸೇರಿದಂತೆ ಹಲವು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಸತತ ಮೊದಲ ಸ್ಥಾನ ಗಳಿಸುತ್ತಾ ಬಂದಿದೆ. ಇದು ಎನ್‌ಸಿಸಿ ತರಬೇತಿಯ ಎಲ್ಲಾ ವಿಭಾಗಗಳಲ್ಲಿ ಮುಂಚೂಣಿಯ ಸ್ಥಾನವನ್ನು ದೃಢಪಡಿಸಿದೆ.

ಜನವರಿ 28, 2026ರಂದು ನವದೆಹಲಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ನಡೆದ ಆರ್‌ಡಿಸಿ-2026 ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿಗಳ ಎನ್‌ಸಿಸಿ ರ್ಯಾಲಿಯ ಸಂದರ್ಭದಲ್ಲಿ ಉಪ ಮಹಾನಿರ್ದೇಶಕ ಏರ್ ಕಮಾಂಡರ್ ಎಸ್. ಬಿ. ಅರುಣ್ ಕುಮಾರ್ ಅವರು ಬ್ಯಾನರ್ ಅನ್ನು ಅಧಿಕೃತವಾಗಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಏರ್ ಕಮಾಂಡರ್ ಎಸ್. ಬಿ. ಅರುಣ್ ಕುಮಾರ್ ಅವರು, “ಸತತ ಎರಡನೇ ವರ್ಷ ಚಾಂಪಿಯನ್ ಆಗಿರುವುದು ನಮ್ಮ ಕ್ಯಾಡೆಟ್‌ಗಳು ಮತ್ತು ಸಿಬ್ಬಂದಿಯ ವೃತ್ತಿಪರತೆ, ಸ್ಥಿತಿಸ್ಥಾಪಕತ್ವ ಮತ್ತು ಯಾವುದೇ ಸವಾಲಿಗೂ ಸಿದ್ಧವಾಗಿರುವ ಮನೋಭಾವಕ್ಕೆ ಸಾಕ್ಷಿಯಾಗಿದೆ. ಇದು ಸಾಮೂಹಿಕ ಕಠಿಣ ಪರಿಶ್ರಮ, ನಿಖರ ತರಬೇತಿ ಮತ್ತು ಅಚಲ ಬದ್ಧತೆಯ ಫಲಿತಾಂಶವಾಗಿದೆ” ಎಂದು ಹೇಳಿದರು.

ಈ ಐತಿಹಾಸಿಕ ಸಾಧನೆಗೆ ಕರ್ನಾಟಕ ಮತ್ತು ಗೋವಾ ರಾಜ್ಯದ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳ ದೃಢ ಬೆಂಬಲ ಮತ್ತು ನೆರವು ಪ್ರಮುಖ ಕಾರಣವಾಗಿದೆ ಎಂದು ಅವರು ಶ್ಲಾಘಿಸಿದರು.
ಈ ಗೆಲುವು ಕರ್ನಾಟಕ ಮತ್ತು ಗೋವಾ ರಾಜ್ಯಗಳ ಯುವಕ-ಯುವತಿಯರ ಶಿಸ್ತು, ಸಮರ್ಪಣೆ ಮತ್ತು ರಾಷ್ಟ್ರಭಕ್ತಿಯನ್ನು ರಾಷ್ಟ್ರಕ್ಕೆ ತೋರಿಸುವ ಗೌರವದ ಕ್ಷಣವಾಗಿದೆ. ‘हर काम देश के नाम’ ಎಂಬ ಧ್ಯೇಯವಾಕ್ಯದಂತೆ ಎನ್‌ಸಿಸಿ ಕ್ಯಾಡೆಟ್‌ಗಳು ದೇಶಕ್ಕಾಗಿ ತಮ್ಮನ್ನು ಸಮರ್ಪಿಸುವ ಮೂಲಕ ಮಾದರಿಯಾಗಿದ್ದಾರೆ.












