ನವದೆಹಲಿ: ಕೇಂದ್ರ ಸರ್ಕಾರದ 2026-27ನೇ ಸಾಲಿನ ಆಯವ್ಯಯವು ಕರ್ನಾಟಕಕ್ಕೆ ಉತ್ತಮವಾಗಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ತೆರಿಗೆ ಪಾಲು ಸಂಬಂಧಿತ ಟೀಕೆಗಳಿಗೆ ಸೂಕ್ತ ಉತ್ತರ ನೀಡಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಅವರು, ರಾಜ್ಯ ಸರ್ಕಾರವು ಕೇಂದ್ರದಿಂದ ತೆರಿಗೆ ಪಾಲಿನಲ್ಲಿ ಅನ್ಯಾಯವಾಗಿದೆ ಎಂದು ಪದೇ ಪದೇ ಆರೋಪಿಸುತ್ತಿದ್ದುದಕ್ಕೆ ಈ ಬಜೆಟ್ ಸರಿಯಾದ ಪ್ರತಿಕ್ರಿಯೆಯಾಗಿದೆ ಎಂದು ತಿಳಿಸಿದರು. 16ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶೇ. 4.13ರಷ್ಟು ತೆರಿಗೆ ಪಾಲು ಶಿಫಾರಸು ಮಾಡಿದ್ದು, ಇದು ಹಿಂದಿನ 15ನೇ ಹಣಕಾಸು ಆಯೋಗದ ಶೇ. 3.64ರಷ್ಟು ಪಾಲಿಗಿಂತ ಹೆಚ್ಚಾಗಿದೆ. ಇದರ ಪ್ರಯೋಜನದಿಂದ 2026-27ನೇ ಸಾಲಿನಲ್ಲಿ ರಾಜ್ಯಕ್ಕೆ ₹63,049 ಕೋಟಿ ತೆರಿಗೆ ಪಾಲು ಲಭ್ಯವಾಗಲಿದೆ ಎಂದು ಸಚಿವರು ಉಲ್ಲೇಖಿಸಿದರು.
ಈ ಹೊಸ ಹಂಚಿಕೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರವನ್ನು ರಾಜಕೀಯವಾಗಿ ಟೀಕಿಸುವ ಅವಕಾಶ ಕಡಿಮೆಯಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ನಿರಾಶೆ ಇಲ್ಲ ಎಂದು ಅವರು ಒತ್ತಿ ಹೇಳಿದರು. ತೆಂಗು ಬೆಳೆಗಾರರಿಗೆ ಪ್ರೋತ್ಸಾಹ ಯೋಜನೆಯಡಿ ಉತ್ಪಾದನೆ ಹೆಚ್ಚಿಸಲು ವಿಶೇಷ ಕ್ರಮಗಳನ್ನು ಘೋಷಿಸಲಾಗಿದೆ. ಗೋಡಂಬಿ (ಕಾಜು) ಮತ್ತು ಕೋಕೋವನ್ನು 2030ರ ವೇಳೆಗೆ ಪ್ರೀಮಿಯಂ ಜಾಗತಿಕ ಬ್ರಾಂಡ್ ಆಗಿ ರೂಪಿಸುವ ಯೋಜನೆಯನ್ನು ಸೇರಿಸಲಾಗಿದೆ. ಶ್ರೀಗಂಧ, ತೆಂಗು ಹಾಗೂ ಕೋಕೋ ಬೆಳೆಗಳಿಗೆ ವಿಶೇಷ ಯೋಜನೆಗಳ ಮೂಲಕ ರಾಜ್ಯದ ಹಲವು ಜಿಲ್ಲೆಗಳಿಗೆ ಲಾಭ ದೊರೆಯಲಿದೆ ಎಂದು ಅವರು ತಿಳಿಸಿದರು.
ಹೈದರಾಬಾದ್-ಬೆಂಗಳೂರು ಹಾಗೂ ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗಳು ರಾಜ್ಯಕ್ಕೆ ದೊಡ್ಡ ವರದಾನವಾಗಲಿವೆ ಎಂದು ಸಚಿವರು ಹೇಳಿದರು. ಈಗಾಗಲೇ ರಾಜ್ಯದಲ್ಲಿ ಹಲವು ವೇಗದ ರೈಲುಗಳು ಮತ್ತು ವಂದೇ ಭಾರತ್ ರೈಲುಗಳು ಕಾರ್ಯಾಚರಣೆಯಲ್ಲಿವೆ. ಹೈ ಸ್ಪೀಡ್ ರೈಲುಗಳ ಸೇರ್ಪಡೆಯಿಂದ ರೈಲು ಸಂಪರ್ಕ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟಾಗಲಿದೆ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.
ಈ ಬಜೆಟ್ ಕೇವಲ ಅಂಕಿಅಂಶಗಳ ಮುಂಗಡ ಪತ್ರವಲ್ಲದೆ ಮುನ್ನೋಟ, ಮುಂದಾಲೋಚನೆ ಮತ್ತು ಫಲಿತಾಂಶ ಆಧಾರಿತವಾಗಿದೆ. ವಿಕಸಿತ ಭಾರತದ ಗುರಿಯನ್ನು ಸಾಕಾರಗೊಳಿಸಲು ಇದು ಪೂರಕವಾಗಿದ್ದು, 2047ರ ವೇಳೆಗೆ ಈ ಗುರಿ ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸ್ಪಷ್ಟ ದಿಕ್ಸೂಚಿ ನೀಡಿದೆ ಎಂದು ಅವರು ಹೇಳಿದರು.
ಗ್ರಾಮೀಣ ಭಾರತಕ್ಕೆ ವಿಶೇಷ ಮನ್ನಣೆ ನೀಡಲಾಗಿದ್ದು, ಪ್ರತಿ ರಾಜ್ಯ, ಜಿಲ್ಲೆ, ತಾಲೂಕು, ಪಂಚಾಯಿತಿ ಮತ್ತು ಹಳ್ಳಿಗಳನ್ನು ಒಳಗೊಂಡಂತೆ ವಿಶಾಲ ವಿಕಾಸಕ್ಕೆ ಈ ಮುಂಗಡ ಪತ್ರ ರೂಪುಗೊಂಡಿದೆ. ಇದು ಮೋದಿ ಅವರ ಲೋಕದೃಷ್ಟಿಗೆ ತಕ್ಕಂತೆ ಮೂಡಿಬಂದಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.












