ಬೆಂಗಳೂರು: ಕಾರ್ಮಿಕರ ಶ್ರಮವೇ ದೇಶದ ನಿರ್ಮಾಣದ ಮೂಲಾಧಾರವಾಗಿದ್ದು, ಅವರ ಬೆವರೇ ರಾಷ್ಟ್ರದ ಅಡಿಪಾಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ಕೆಪಿಸಿಸಿ ಕಚೇರಿ ಭಾರತ ಜೋಡೋ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದ ಅವರು, “ನಾವು ನೀರಿನಲ್ಲಿ ಸ್ನಾನ ಮಾಡುತ್ತೇವೆ, ಆದರೆ ಕಾರ್ಮಿಕರು ತಮ್ಮ ಬೆವರಿನಲ್ಲಿ ಸ್ನಾನ ಮಾಡಿ ಇತಿಹಾಸ ನಿರ್ಮಿಸುತ್ತಾರೆ. ಕಾರ್ಮಿಕ ವರ್ಗದಲ್ಲಿ ಜಾತಿ, ಧರ್ಮ ಎಂಬ ಭೇದವಿಲ್ಲ; ಶ್ರಮವೇ ಅವರ ಶ್ರೇಷ್ಠ ಗುರುತು” ಎಂದು ಹೇಳಿದರು.
ಸಮಾಜದಲ್ಲಿ ಕೃಷಿಕ, ಕಾರ್ಮಿಕ, ಸೈನಿಕ ಹಾಗೂ ಶಿಕ್ಷಕರು ಪ್ರಮುಖ ಆಧಾರಸ್ತಂಭಗಳಾಗಿದ್ದು, ಈ ನಾಲ್ಕು ವರ್ಗಗಳು ಬಲಿಷ್ಠವಾಗಿದ್ದರೆ ದೇಶವೂ ಬಲಿಷ್ಠವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. “ಕಾರ್ಮಿಕರಿಗೆ ನ್ಯಾಯ ಸಿಕ್ಕಾಗ ಮಾತ್ರ ದೇಶದ ಪ್ರಗತಿ ಸಾಧ್ಯ. ಮನೆ, ರಸ್ತೆ, ಕಟ್ಟಡ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಮಿಕರ ಪರಿಶ್ರಮದ ಫಲ” ಎಂದರು.
ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದ ಅವರು, ಕಳೆದ ಹಲವು ವರ್ಷಗಳಲ್ಲಿ ಕಾರ್ಮಿಕರ ಬದುಕಿನಲ್ಲಿ ಮಹತ್ತರ ಬದಲಾವಣೆ ತರಲು ವಿಫಲವಾಗಿದೆ ಎಂದು ಆರೋಪಿಸಿದರು. “ಕಾರ್ಮಿಕರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ” ಎಂದು ಹೇಳಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಅವರು, “ಕಾರ್ಮಿಕರ ಮನೆಗಳಲ್ಲಿ ಬೆಳಕು ತರಲು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಈ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಸರಾಸರಿ ಮಾಸಿಕ 5 ಸಾವಿರ ರೂಪಾಯಿ ಉಳಿತಾಯವಾಗುತ್ತಿದೆ” ಎಂದು ತಿಳಿಸಿದರು.
ಗಿಗ್ ಕಾರ್ಮಿಕರ ಭದ್ರತೆಗೆ ಸಂಬಂಧಿಸಿದಂತೆ ಹೊಸ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಹೇಳಿದ ಅವರು, ಕಾರ್ಮಿಕ ಸಂಘಟನೆಗಳು ಬೂತ್ ಮಟ್ಟದಲ್ಲಿ ಬಲವಾಗಬೇಕು ಎಂದು ಕರೆ ನೀಡಿದರು. “ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಸಂಘಟಿಸಿದರೆ ಅದು ದೊಡ್ಡ ಶಕ್ತಿಯಾಗಿ ಪರಿಣಮಿಸುತ್ತದೆ” ಎಂದರು.
ರಾಜ್ಯದಲ್ಲಿ 12,500 ಪೌರ ಕಾರ್ಮಿಕರನ್ನು ಖಾಯಂ ಮಾಡಿರುವುದಾಗಿ ತಿಳಿಸಿದ ಅವರು, ಅವರಿಗೆ ಉತ್ತಮ ವೇತನ ಹಾಗೂ ಭದ್ರತೆ ಒದಗಿಸಲಾಗಿದೆ ಎಂದರು.
ಕಾರ್ಮಿಕರ ಹಿತಕ್ಕಾಗಿ ಕೆಲಸ ಮಾಡಿದ ನಾಯಕರು ಆಸ್ಕರ್ ಫರ್ನಾಂಡೀಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸ್ಮರಿಸಿದ ಅವರು, ಇಎಸ್ಐ ಆಸ್ಪತ್ರೆಗಳ ಮೂಲಕ ಕಾರ್ಮಿಕರಿಗೆ ಉತ್ತಮ ಆರೋಗ್ಯ ಸೌಲಭ್ಯ ಮತ್ತು ಅವರ ಮಕ್ಕಳಿಗೆ ವೈದ್ಯಕೀಯ ಶಿಕ್ಷಣದ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಇದಲ್ಲದೆ, ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ಸುಮಾರು 56 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಬೆಲೆ ಏರಿಕೆ ಸಂದರ್ಭದಲ್ಲಿ ಈ ಯೋಜನೆಗಳು ಜನರಿಗೆ ಆರ್ಥಿಕ ಆಸರೆಯಾಗಿವೆ ಎಂದು ಅವರು ಹೇಳಿದರು.
ಕಾರ್ಮಿಕರ ಬದುಕಿಗೆ ಕಾಂಗ್ರೆಸ್ ಪಕ್ಷ ಸದಾ ಬೆಂಬಲವಾಗಿದ್ದು, ಸಮಾಜದ ಎಲ್ಲಾ ವರ್ಗಗಳ ಸಮಾನ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಶಿವಕುಮಾರ್ ಹೇಳಿದರು.












