ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿಗಳು ವಿನಯ್ ಗೌಡ ಮತ್ತು ರಜತ್ ಕಿಶಾನ್ ವಿರುದ್ಧ ಬೆಂಗಳೂರು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ರೀಲ್ಸ್ ನಲ್ಲಿ ನಿಷೇಧಿತ ಮಾರಕಾಸ್ತ್ರದ ಬಳಕೆ ಕಂಡು ಬಂದಿದ್ದು, ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ರೀಲ್ಸ್ ಮಾಡುವಾಗ ನಿಯಮ ಉಲ್ಲಂಘನೆ
ಬಸವೇಶ್ವರನಗರ ಠಾಣೆಯ ಪಿಎಸ್ಐ ಭಾನು ಪ್ರಕಾಶ್ ನೀಡಿದ ದೂರಿನ ಅನ್ವಯ, ಈ ಇಬ್ಬರು ಸ್ಪರ್ಧಿಗಳು ರೀಲ್ಸ್ ಮಾಡುವಾಗ ನಿಷೇಧಿತ ಲಾಂಗ್ ಹಿಡಿದುಕೊಂಡು ಪೋಸ್ ನೀಡಿದ್ದಾರೆ. ಈ ರೀಲ್ಸ್ ಅನ್ನು ರಜತ್ ಕಿಶಾನ್ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿತ್ತು.
ಸಾರ್ವಜನಿಕರಲ್ಲಿ ಭಯದ ವಾತಾವರಣ
ಈ ವಿಡಿಯೋ ಸಾರ್ವಜನಿಕ ಸ್ಥಳದಲ್ಲಿ ಚಿತ್ರೀಕರಿಸಲ್ಪಟ್ಟಿದ್ದು, ಇದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವ ರೀತಿಯಲ್ಲಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. “bujji” ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ 18 ಸೆಕೆಂಡಿನ ವಿಡಿಯೋ ಅಪ್ಲೋಡ್ ಮಾಡಲಾಗಿತ್ತು. ಇದು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಧಕ್ಕೆ ತಂದಿರುವುದರಿಂದ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಸೋಷಿಯಲ್ ಮೀಡಿಯಾ ಮೇಲ್ವಿಚಾರಣೆ ತೀವ್ರಗೊಳಿಸಿದ ಪೊಲೀಸರು
ಬಸವೇಶ್ವರನಗರ ಪೊಲೀಸ್ ಠಾಣೆಯ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ವಿಭಾಗದ ಪಿಎಸ್ಐ ಪ್ರಕಾಶ್ ಈ ಪ್ರಕರಣವನ್ನು ಪರಿಶೀಲನೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಕಾನೂನು ಉಲ್ಲಂಘನೆ ತಡೆಯಲು ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.












