ಚಿತ್ರದುರ್ಗ: ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಅವರ ಚಳ್ಳಕೆರೆ ನಿವಾಸ ಹಾಗೂ ಬೆಂಗಳೂರಿನ ವಸಂತನಗರದ ಖಾಸಗಿ ಅಪಾರ್ಟ್‌ಮೆಂಟ್ ಸೇರಿದಂತೆ 15ಕ್ಕೂ ಹೆಚ್ಚು ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದೆ. ಈ ದಾಳಿಯಲ್ಲಿ 11 ಜನ ಇಡಿ ಅಧಿಕಾರಿಗಳು ಮೂರು ವಾಹನಗಳಲ್ಲಿ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ವಸಂತನಗರದ ಏಳನೇ ಮಹಡಿಯಲ್ಲಿರುವ ಶಾಸಕರ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ದಾಳಿಯಲ್ಲಿ, ವೀರೇಂದ್ರ ಪಪ್ಪಿ ಅವರ ಕಂಪನಿಗಳ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಈ ಪ್ಲಾಟ್‌ನಿಂದಲೇ ಗೋವಾದ ಉದ್ಯಮವೂ ಸೇರಿದಂತೆ ಅವರ ಎಲ್ಲಾ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವು ಎಂಬ ಮಾಹಿತಿ ಲಭ್ಯವಾಗಿದೆ. ಶಾಸಕರು ಚಿತ್ರದುರ್ಗದಲ್ಲಿ ಕೇವಲ ಶಾಸಕರ ಕ್ಷೇತ್ರದ ಕೆಲಸಗಳಲ್ಲಿ ಸಕ್ರಿಯರಾಗಿದ್ದು, ವಸಂತನಗರದ ಪ್ಲಾಟ್‌ನಿಂದಲೇ ವ್ಯಾಪಾರ ಸಂಬಂಧಿತ ಸಭೆಗಳು ಮತ್ತು ಉದ್ಯಮದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಇದೇ ವೇಳೆ, ವೀರೇಂದ್ರ ಪಪ್ಪಿ ಅವರ ವ್ಯಾಪಾರ ಪಾಲುದಾರರಾದ ಕುಸುಮಾ ಹನುಮಂತರಾಯಪ್ಪ ಅವರ ಮನೆಯ ಮೇಲೂ ಇಡಿ ದಾಳಿ ನಡೆಸಿದೆ. ಹನುಮಂತರಾಯಪ್ಪ ಅವರ ಪುತ್ರ ಕೂಡ ಈ ವ್ಯವಹಾರದಲ್ಲಿ ಪಾಲುದಾರರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಸಹಕಾರ ನಗರದಲ್ಲಿರುವ ಶಾಸಕರ ಇನ್ನೊಂದು ನಿವಾಸದ ಮೇಲೂ ದಾಳಿ ನಡೆದಿದ್ದು, ಇಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಪರಿಶೀಲನೆಯು ಮುಂದುವರಿದಿದ್ದು, ಈ ದಾಳಿಯಿಂದ ಶಾಸಕರ ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಬಹಿರಂಗಗೊಳ್ಳುವ ಸಾಧ್ಯತೆಯಿದೆ.












