ಬೆಂಗಳೂರಿನ ಪ್ರಮುಖ ರಸ್ತೆ; ಪಂಚಾಯತ್‌ಗಳಿಗೆ ವಾರ್ಷಿಕ ಪ್ರಶಸ್ತಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಘೋಷಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದ ಸಿಎಂ, ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೆಡಿಕಲ್ ಕಾಲೇಜಿಗೆ ರಾಮಕೃಷ್ಣ ಹೆಗಡೆ ಅವರ ಹೆಸರಿಡುವ ನಿರ್ಧಾರವನ್ನು ಪ್ರಕಟಿಸಿದರು. ಜೊತೆಗೆ ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಗೂ ಅವರ ಹೆಸರಿಡಲಾಗುವುದು ಎಂದು ತಿಳಿಸಿದರು.
ಗ್ರಾಮೀಣ ಆಡಳಿತಕ್ಕೆ ಹೆಗಡೆ ನೀಡಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಅವರ ಜನ್ಮದಿನದಂದು ‘ರಾಮಕೃಷ್ಣ ಹೆಗಡೆ ಶ್ರೇಷ್ಠ ಪಂಚಾಯತಿ ಪ್ರಶಸ್ತಿ’ ನೀಡುವ ಕಾರ್ಯಕ್ರಮ ರೂಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು. ಇದರ ಮೂಲಕ ಹೆಗಡೆ ಅವರ ಪಂಚಾಯತ್ ರಾಜ್ ಪರಿಕಲ್ಪನೆ ಹಾಗೂ ಗ್ರಾಮೀಣಾಭಿವೃದ್ಧಿ ಚಿಂತನೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶವಿದೆ ಎಂದು ಸ್ಪಷ್ಟಪಡಿಸಿದರು.
“ನಾಯಕರನ್ನು ಸೃಷ್ಟಿಸಿದ ನಾಯಕ”
“ರಾಮಕೃಷ್ಣ ಹೆಗಡೆ ಅವರು ಕೇವಲ ಅಧಿಕಾರ ನಡೆಸಿದ ನಾಯಕರಲ್ಲ; ಪಂಚಾಯತ್‌ನಿಂದ ಸಂಸತ್ತಿನವರೆಗೆ ಹೊಸ ನಾಯಕತ್ವವನ್ನು ಸೃಷ್ಟಿಸಿದ ನಾಯಕ. ಒಬ್ಬ ನಾಯಕನ ಕೆಲಸ ಕೇವಲ ಹಿಂಬಾಲಕರನ್ನು ಸೃಷ್ಟಿಸುವುದಲ್ಲ. ನಾಯಕರನ್ನು ಸೃಷ್ಟಿಸುವುದೇ ನಿಜವಾದ ನಾಯಕತ್ವ. ಇದೇ ಅವರ ಮೂಲ ತತ್ವವಾಗಿತ್ತು,” ಎಂದು ಸಿಎಂ ಬಣ್ಣಿಸಿದರು.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕರ್ನಾಟಕದ ಪ್ರಯೋಗಗಳು ದೇಶಕ್ಕೆ ಮಾದರಿಯಾಗಿದ್ದವು. ನಂತರ ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳಿಗೆ ಈ ಚಿಂತನೆ ಪ್ರೇರಣೆಯಾಯಿತು ಎಂದು ಅವರು ಸ್ಮರಿಸಿದರು.
ಹೆಗಡೆ ಅವರು ಜಾತಿ ಆಧಾರಿತ ರಾಜಕಾರಣಕ್ಕೆ ಸೀಮಿತವಾಗದೆ ಮೌಲ್ಯಾಧಾರಿತ ರಾಜಕಾರಣ ಮತ್ತು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ್ದರು. ಅವರ ನಾಯಕತ್ವವನ್ನು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಜನರು ಒಪ್ಪಿಕೊಂಡಿದ್ದರು ಎಂದು ಹೇಳಿದರು.
ಶಿಕ್ಷಣ ಮತ್ತು ಅಭಿವೃದ್ಧಿ ಕ್ಷೇತ್ರದ ಕೊಡುಗೆ
ಕರ್ನಾಟಕದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದ ವಿಸ್ತರಣೆಗೆ ಹೆಗಡೆ ಅವರ ನೀತಿಗಳು ಸಹಕಾರಿಯಾದವು ಎಂದು ಸಿಎಂ ಉಲ್ಲೇಖಿಸಿದರು. ಇಂದು ರಾಜ್ಯದಲ್ಲಿ ವರ್ಷಕ್ಕೆ ಸುಮಾರು 13,940 ವೈದ್ಯರು ಹಾಗೂ 1.25 ಲಕ್ಷಕ್ಕೂ ಹೆಚ್ಚು ಎಂಜಿನಿಯರ್‌ಗಳು ರೂಪುಗೊಳ್ಳುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೂ ಹೆಗಡೆ ಕಾಲದ ನೀತಿಗಳು ದಾರಿ ಮಾಡಿಕೊಟ್ಟವು. ಇದರ ಪರಿಣಾಮವಾಗಿ ಕರ್ನಾಟಕ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದರು.
1982–87ರ ಅವಧಿಯಲ್ಲಿ ರಾಜ್ಯದ ಬಜೆಟ್ ಗಾತ್ರ ಸುಮಾರು ₹3,687 ಕೋಟಿ ಇದ್ದರೆ, ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಅಂದಾಜು ₹4.50 ಲಕ್ಷ ಕೋಟಿಯ ಮಟ್ಟಕ್ಕೆ ಏರಿದೆ ಎಂದು ಹೋಲಿಕೆ ಮಾಡಿದರು.
ಕನಕಪುರದ ನೆನಪು ಮತ್ತು ಹೆಗಡೆ ಶಾಲೆ
ತಮ್ಮ ರಾಜಕೀಯ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ಸಿಎಂ, “ಕನಕಪುರದಲ್ಲಿ ರಾಮಕೃಷ್ಣ ಹೆಗಡೆ ಮತ್ತು ಪಿ.ಜಿ.ಆರ್. ಸಿಂಧ್ಯಾ ಅವರ ಪ್ರಭಾವದ ನಡುವೆಯೇ ನಾನು ರಾಜಕೀಯಕ್ಕೆ ಬಂದೆ. ಒಂದು ಚುನಾವಣೆಯಲ್ಲಿ ಸೋತಿದ್ದೇನೆ. ಇಲ್ಲದಿದ್ದರೆ ಇಂದು ಒಂಬತ್ತನೇ ಬಾರಿ ಶಾಸಕನಾಗಿರುತ್ತಿದ್ದೆ,” ಎಂದು ಹೇಳಿದರು.
ಸಿದ್ದರಾಮಯ್ಯ, ಆರ್.ವಿ. ದೇಶಪಾಂಡೆ, ಬಸವರಾಜ ರಾಯರೆಡ್ಡಿ, ಬಿ.ಎಲ್. ಶಂಕರ್ ಸೇರಿದಂತೆ ಅನೇಕ ನಾಯಕರು ಹೆಗಡೆ ಅವರ ರಾಜಕೀಯ ಶಾಲೆಯೊಂದಿಗೆ ಬೆಳೆದವರು. “ಹೆಗಡೆ ಅವರು ಹಿಂಬಾಲಕರನ್ನು ಮಾತ್ರ ಸೃಷ್ಟಿಸಲಿಲ್ಲ; ನಾಯಕರನ್ನು ಸೃಷ್ಟಿಸಿದರು. ಇಲ್ಲಿ ಕುಳಿತಿರುವ ನೂರಾರು ನಾಯಕರು ಅದಕ್ಕೆ ಸಾಕ್ಷಿ,” ಎಂದು ಅವರು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೆಗಡೆ ಅವರಲ್ಲಿ ರಾಮನ ಆದರ್ಶ ಮತ್ತು ಕೃಷ್ಣನ ರಾಜತಂತ್ರ—ಎರಡೂ ಗುಣಗಳಿದ್ದವು ಎಂದು ಹೇಳಿದ್ದನ್ನು ಸಿಎಂ ಉಲ್ಲೇಖಿಸಿದರು. “ರಾಮಕೃಷ್ಣ ಹೆಗಡೆ ಅವರಿಗೆ ದೇಶದ ಪ್ರಧಾನಿಯಾಗುವ ಯೋಗ್ಯತೆ ಮತ್ತು ಅವಕಾಶ ಎರಡೂ ಇತ್ತು. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ,” ಎಂದು ಅವರು ತಿಳಿಸಿ, ಆ ವಿಚಾರದ ಕುರಿತು ಹೆಚ್ಚು ಚರ್ಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹೆಗಡೆ ಆದರ್ಶದ ಹೆಜ್ಜೆಯಲ್ಲೇ ಸರ್ಕಾರ
“ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಹುಟ್ಟು ಉಚಿತ, ಮರಣ ಖಚಿತ. ಆದರೆ ಈ ಹುಟ್ಟು-ಸಾವಿನ ನಡುವಿನ ಅವಧಿಯಲ್ಲಿ ನಾವು ಏನು ಮಾಡುತ್ತೇವೆ ಎಂಬುದೇ ಮುಖ್ಯ. ಹೆಗಡೆ ಅವರು ಮಾಡಿದ ಕೆಲಸ, ಸೇವೆ ಮತ್ತು ನಾಯಕತ್ವ ಶಾಶ್ವತವಾಗಿ ನೆನಪಿನಲ್ಲಿ ಉಳಿಯಬೇಕು,” ಎಂದು ಸಿಎಂ ಹೇಳಿದರು.
ನಮ್ಮ ಸರ್ಕಾರ ರಾಮಕೃಷ್ಣ ಹೆಗಡೆ ಅವರ ಆಚಾರ–ವಿಚಾರ, ಮೌಲ್ಯಾಧಾರಿತ ರಾಜಕಾರಣ, ಪಂಚಾಯತ್ ರಾಜ್ ಮತ್ತು ಅಭಿವೃದ್ಧಿ ಚಿಂತನೆಗಳನ್ನು ಮುಂದುವರಿಸಿಕೊಂಡು ಹೋಗಲಿದೆ ಎಂದು ಅವರು ಭರವಸೆ ನೀಡಿದರು.











